Saturday, 20 April 2013

"ದುರಂತ ಪ್ರೇಮಕಥೆ"



 ಗುರುವಾರ ಬೆಳಿಗ್ಗೆ ೬ ಗಂಟೆಗೆ ಎದ್ದು ಕ್ರಿಕೇಟ್ ಆಡುವುದಕ್ಕೆ ಹೋಗುವಾಗ ಬಸ್ ನಿಲ್ದಾಣದಲ್ಲಿ ಒಂದು ಹುಡುಗಿಯನ್ನು ನೋಡಿದೆ ಅಷ್ಟೋಂದು ಸುಂದರಿ ಅಲ್ಲ.ಆದರೂ ನೋಡಿದ ಕೂಡಲೇ ತುಂಬಾ ಇಷ್ಟವಾಗಿದ್ದಳು.ಮನಸ್ಸು ಹೇಳಿತು ನಿನಗೆ ಸರಿ ಜೋಡಿ ಈ ಹುಡುಗಿ ಅಂದಿತು.ಹೃದಯ ಒಂದು ಹೆಜ್ಜೆ ಮುಂದು ಹೋಗಿ ಪ್ರೀತಿಸುವುದಾದರೆ ಇವಳನ್ನೇ ಪ್ರೀತಿಸು ಅಂದಿತು.ಮನಸ್ಸು ಮತ್ತು ಹೃದಯದ ಮಾತು ಕೇಳಿ ಧೈರ್ಯ ತಂದುಕೊಂಡು ಅವಳ ಹತ್ತಿರ ಹೋಗಿ ಭಯದಲ್ಲಿ "ನನ್ನನ್ನು ಪ್ರೀತಿಸುತ್ತೀರಾ" ಅಂತ ಕೇಳುವುದು ಬಿಟ್ಟು "ನನ್ನನ್ನು ಮದುವೆಯಾಗುತ್ತೀರಾ"ಅಂತ ಕೇಳಿದೆ.ಅದಕ್ಕೆ ಅವಳು ನಗುತ್ತ "ಆಯ್ತು ನಮ್ಮ ತಂದೆಯನ್ನು ಒಪ್ಪಿಸಿ ಮೊದಲು ಆಮೇಲೆ ನೋಡೋಣ"ಅಂತ ಹೇಳಿ ಮನೆ ವಿಳಾಸ ಕೊಟ್ಟು "ತಂದೆ ಸಂಜೆ ಇರುತ್ತಾರೆ ಬನ್ನಿ" ಅಂತ ಹೇಳಿ ನಗುತ್ತ ಹೊರಟುಹೋದಳು.ನನಗೆ ಪ್ರಪಂಚ ಗೆದ್ದಷ್ಟು ಖುಷಿ ನನ್ನ ಮೊದಲ ಪ್ರಯತ್ನವೇ ಜಯಶಾಲಿಯಾಗಿದ್ದಕ್ಕೆ...
 ಸಂಜೆ ಇರುವುದರಲ್ಲಿ ಒಳ್ಳೆಯ ಬಟ್ಟೆ ಧರಿಸಿಕೊಂಡು ಬೈಕ್ ಹತ್ತಿಕೊಂಡು ಅವರ ಮನೆ ಹತ್ತಿರ ಹೋದೆ.ಅವಳ ಮನೆಯ ತುಂಬಾ ಜನ ಸೇರಿದ್ದರು.ಏನೋ ಸಮಾರಂಭ ನಡೆಯುವ ಹಾಗಿತ್ತು,ನಾನಂದುಕೊಂಡೆ ಅವಳ ನಿಶ್ಚಿತಾರ್ಥವಿರಬೇಕು.ತುಂಬಾ ಬೇಸರವಾಯಿತು.ಆದರೂ ಸ್ವಲ್ಪ ಧೈರ್ಯ ತಂದುಕೊಂಡು ಅಲ್ಲಿದ್ದ ಒಬ್ಬ ಹುಡುಗನನ್ನು ಕೇಳಿದೆ."ಆ ಮನೆಯಲ್ಲಿ ಏನು ಪ್ರೋಗ್ರಾಮ್ ಎಲ್ಲರೂ ತುಂಬಾ ಖುಷಿಯಲ್ಲಿದ್ದಾರಲ್ಲ" ಅದಕ್ಕೆ ಆ ಹುಡುಗ ಅಲ್ಲಿ ನಿಂತುಕೊಂಡಿರುವ ಹುಡುಗಿಯನ್ನು ನೋಡಿ ಅಂದ.ನಾನು ನೋಡಿದೆ ಬೆಳಿಗ್ಗೆ ನೋಡಿದ ಹುಡುಗಿ ಅಲ್ಲಿದ್ದಳು".ಆ ಹುಡುಗ ಹೇಳಿದ "ಅವಳ ಅಪ್ಪ ೩ ಕೊಲೆ ಮಾಡಿ ಜೈಲಿಗೆ ಹೋಗಿ ಬೇಲಿನಲ್ಲಿ ಮತ್ತೆ ವಾಪಾಸು ಬರುತ್ತಿದ್ದಾರೆ ಇವತ್ತು ಅದಕ್ಕೆ ಈ ಸಂಭ್ರಮ ಸಡಗರ" ಅಂದ ಹುಡುಗ.ಅವನ ಮಾತು ಕೇಳಿದ ಉಸಿರು ನಿಂತ ಹಾಗಾಯಿತು.ಆ ಹುಡುಗಿ ಎಷ್ಟು ಕಿಲಾಡಿ ಸೀದಾ ಪರಲೋಕಕ್ಕೆ ಕಳುಹಿಸುವ ಪ್ಲಾನ್ ಅವಳದು.ತಂದೆ ಹತ್ತಿರ ಮಾತನಾಡಿ ಅಂದಾಗಲೇ ನಾನು ಸ್ವಲ್ಪ ಜಾಗ್ರತೆ ವಹಿಸಬೇಕಿತ್ತು ಅಲ್ವಾ....
 "ನಿನಗೆ ಈ ಹುಡುಗಿ ಸರಿಯಾದವಳು,ಪ್ರೀತಿಸು ಅಂತ ಹೇಳಿ ನನ್ನ ಜೀವನವನ್ನೇ ನಾಶಮಾಡುತ್ತಿದ್ದೀರಿ".ಅಂತ ಮನಸ್ಸು ಹೃದಯಕ್ಕೆ ಸರಿಯಾಗಿ ಬೈದು ಜೀವ ಇದ್ದರೆ ಇನ್ನೊಬ್ಬಳನ್ನು ಪ್ರೀತಿ ಮಾಡಬಹುದು ಅಂತ ಹೇಳಿ ಬೈಕ್ ರಿವರ್ಸ್ ತೆಗೆದುಕೊಂಡು ಆ ಮನೆ ಕಡೆ ನೋಡದೆ ನಮ್ಮ ಮನೆಗೆ ಬಂದೆ.ಬೆಳಿಗ್ಗೆ ಹುಟ್ಟಿದ ಪ್ರೀತಿ ಸಂಜೆ ದುರಂತದಲ್ಲಿ ಅಂತ್ಯಗೊಂಡಿತು ನನ್ನ ಮೊದಲ ಪ್ರೀತಿ.......

           ಎನ್.ರಾಜೇಶ್.ಕುಮಾರ್.ನೇರಳಕಟ್ಟೆ

"ಸಣ್ಣಕಥೆ"




  ಪ್ರತಿದಿನ ಬಸ್ಸಲ್ಲಿ ಅವನು ಅವಳನ್ನು ನೋಡುತ್ತಿದ್ದ.ಅವಳು ಸಹ ನೋಡಿ ನಗಾಡುತ್ತಿದ್ದಳು.ವರ್ಷಗಳು ಉರುಳುತ್ತಿವೆ ಇವರಿಬ್ಬರು ಬರಿ ನಗು ಮತ್ತು ಕಣ್ಣಿನ ಮೂಲಕ ಮಾತನಾಡುತ್ತಿದ್ದಾರೆ.ಅವನಿಗೆ ಅವಳೆಂದರೆ ಇಷ್ಟ,ಅವಳಿಗೂ ಅವನು ಅಂದರೆ ಇಷ್ಟ.ಇಬ್ಬರು ತಮ್ಮ ಪ್ರೀತಿಯನ್ನು ಬಾಯಿಬಿಟ್ಟು ಹೇಳಿಕೊಂಡಿರಲಿಲ್ಲ. ಪ್ರೀತಿಸುತ್ತಿರುವ ವಿಷಯ ಅವನು ಹೇಳಲಿ ಅಂತ ಅವಳು ಕಾಯುತ್ತಿದ್ದಾಳೆ ,ಅವಳೇ ಹೇಳಲಿ ಅಂತ ಇವನು ಕಾಯುತ್ತಿದ್ದಾನೆ.
ಅವಳಿಗೆ ಗೊತ್ತಿಲ್ಲ ಅವನು ಮೂಗ ಅಂತ...ಅವನಿಗೂ ಗೊತ್ತಿಲ್ಲ ಅವಳು ಮೂಕಿ ಅಂತ....

                    ಎನ್.ಆರ್.ಕೆ.ನೇರಳಕಟ್ಟೆ...


Thursday, 4 April 2013

"ಆಲಿಂಗನ"

 
  ತುಮಕೂರಿನಲ್ಲಿ ನಡೆದ ಕ್ರಿಕೇಟ್ ಪಂದ್ಯಾಟದಲ್ಲಿ ನಮ್ಮ ತಂಡ ಫೈನಲಿನಲ್ಲಿ ಅಮೋಘ ಜಯಗಳಿಸಿತ್ತು..ನನಗೆ ಮತ್ತು ತಂಡದವರಿಗೆ ತುಂಬಾ ಖುಷಿಯಾಗಿತ್ತು ಎಲ್ಲರೂ ಖುಷಿಯಿಂದಲೇ ಬೆಂಗಳೂರು ಕಡೆ ಹೊರಟೆವು.ನೆಲಮಂಗಲ ಹತ್ತಿರ ಬಂದಾಗ ನಮ್ಮ ಪ್ರೇಮತ್ತೆಯ ನೆನಪಾಗಿತ್ತು ಜೊತೆಗೆ ಪ್ರೀತಿಯ ಹುಡುಗಿ ಅತ್ತೆ ಮಗಳು ದಿವ್ಯಾ ನೆನಪಾಗಿದ್ದಳು.ಅವರ ಮನೆ ನೆಲಮಂಗಲದ ಹತ್ತಿರ ಅರಿಶಿನಕುಂಟೆಯಲ್ಲಿ ನಾನು ಅವರ ಮನೆಗೆ ಹೋಗದೆ ೬ ತಿಂಗಳು ಮೇಲಾಗಿತ್ತು.ಅದಕ್ಕೆ ಈ ಸಲ ಹೋಗಬೇಕು ಅಂದಕೊಂಡು ಅರಿಶಿನಕುಂಟೆಯಲ್ಲಿ ಕಾರಿನಿಂದ ಇಳಿದು ಗೆಳೆಯರಿಗೆಲ್ಲಾ ಮಾವನ ಮನೆಗೆ ಹೋಗುತ್ತಿನಿ ನಾಳೆ ಬೆಳಿಗ್ಗೆ ಮ್ಯಾಚ್ ನಲ್ಲಿ ಸಿಗುತ್ತೀನಿ ಅಂದಾಗ ನಾಳೆ ಸೆಮಿಫೈನಲ್ ಮ್ಯಾಚ್ ಇರುವುದು ಅತ್ತೆ ಮಗಳನ್ನು ನೋಡಿಕೊಂಡು ಮ್ಯಾಚ್ ಮರೆಯಬೇಡ ಅಂದರು ಗೆಳೆಯರೆಲ್ಲಾ ಬೆಳಿಗ್ಗೆ ಬರುತ್ತೀನಿ ಮಿಸ್ ಮಾಡುವುದಿಲ್ಲ ಅಂತ ಹೇಳಿ ಅತ್ತೆ ಮನೆ ಕಡೆ ಹೊರಟೆ..
 ಪ್ರೇಮತ್ತೆ ನನ್ನ ತಂದೆಯ ತಂಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಡಾಕ್ಟರ್.ಮಾವ ನಾಗರಾಜ ಪೊಲೀಸ್ ಸಬ್ ಇನ್ಸಪೆಕ್ಟರ್.ಅತ್ತೆಗೆ ಇಬ್ಬರು ಹುಡುಗಿಯರು ಒಬ್ಬಳು ವಿದ್ಯಾ ಇನ್ನೊಬ್ಬಳು ದಿವ್ಯಾ.ವಿದ್ಯಾಳಿಗೆ ಮದುವೆಯಾಗಿ ಗಂಡನ ಮನೆಯಲ್ಲಿದ್ದಳು.ದಿವ್ಯಾ ನನಗಿಂತ ೨ ವರ್ಷ ಚಿಕ್ಕವಳು.ಕಾಲೇಜ್ ಓದುತ್ತಿದ್ದಳು.ಮುದ್ದು ಮುಖದ ಸ್ವಲ್ಪ ಡುಮ್ಮಿ ನನ್ನ ಪ್ರೀತಿಯ ಹುಡುಗಿ.ನಮ್ಮಿಬ್ಬರ ಪ್ರೀತಿಗೆ ಎರಡು ಮನೆಯಲ್ಲಿ ಒಪ್ಪಿಗೆಯಿತ್ತು ಅದರಿಂದ ನಮಗೆ ಪ್ರೀತಿಯಲ್ಲಿ ಸಮಸ್ಯೆಯಿಲ್ಲವಾಗಿತ್ತು.ಚಿಕ್ಕಂದಿನಲ್ಲಿಯೇ ನಮ್ಮಿಬ್ಬರ ಮದುವೆ ಮಾತುಕಥೆಯಾಗಿತ್ತು.ನಾವು ಸಹ ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತಿದ್ದೇವು.ನಾನು ದಿವ್ಯಾಳಿಗೆ "ಡುಮ್ಮಿ" ಅಂತ ಕರೆದರೆ ಅವಳು ನನಗೆ "ಲೂಸು" ಅಂತ ಕರೆಯುತ್ತಿದ್ದಳು.
 ತುಂಬಾ ದಿನದ ನಂತರ ಮನೆಗೆ ಬಂದಿರುವುದರಿಂದ ಅತ್ತೆ ಮಾವ ತುಂಬಾ ವಿಚಾರಿಸಿದರು.ಆದರೆ ಡುಮ್ಮಿ ಮಾತ್ರ ಯಾಕೆ ಇವತ್ತು ಬಂದಿದ್ದು ವರ್ಷ ಬಿಟ್ಟು ಬರಬೇಕಾಗಿತ್ತು ಅಂತ ಹುಸಿಮುನಿಸು ತೋರಿಸಿದಳು.ಅವಳನ್ನು ಸಮಾಧಾನ ಮಾಡಲ್ಲಿಕ್ಕೆ ಸಾಕುಸಾಕಾಗಿತ್ತು.ಹುಡುಗಿಯರನ್ನು ಸಮಾಧಾನ ಮಾಡಲ್ಲಿಕ್ಕೆ ಸತ್ಯ ಹೇಳಿದರೆ ಪ್ರಯೋಜನಯಿಲ್ಲ ಅಂತ ಗೊತ್ತಿತ್ತು ಅದಕ್ಕೆ ಸುಳ್ಳು ಸುಳ್ಳು ಹೇಳಿ ಅವಳನ್ನು ಸಮಾಧಾನ ಮಾಡಿದೆ.ಕೊನೆಗೂ ಅವಳ ಮುದ್ದುಮುಖದಲ್ಲಿ ನಗೆಯನ್ನು ನೋಡಿದೆ.ದಿವ್ಯಾಳ ನಗು ನನಗೆ ತುಂಬಾ ಖುಷಿಕೊಡುತ್ತಿತ್ತು.ನಗುಮಖದ ಅಂದಕ್ಕೆ ದಿವ್ಯಾಳನ್ನು ಇಷ್ಟಪಟ್ಟಿರಬೇಕು ಅನಿಸುತ್ತಿತ್ತು ನನಗೆ.
 ಅತ್ತೆ ನನಗಿಷ್ಟವಾದ ಮೀನು ಸಾರು ಮಾಡಿದ್ದರು.ಊಟ ಮಾಡುವಾಗ ಅತ್ತೆಗೆ ಹೇಳಿದೆ"ಅತ್ತೆ ನಾಳೆ ಬೆಳಿಗ್ಗೆ ಜಯನಗರದಲ್ಲಿ ಮ್ಯಾಚ್ ಇದೆ ಅದಕ್ಕೆ ನಾನು ಬೆಳಿಗ್ಗೆ ಬೇಗ ಹೋಗುತ್ತೀನಿ" ಅಂದೆ ಡುಮ್ಮಿ ಅಷ್ಟಕ್ಕೆ ಮುಖ ಊದಿಸಿಕೊಂಡಳು.ಅತ್ತೆ ಹೇಳಿದರು ನಾಳೆ ಹೋಗುವುದು ಬೇಡ ೨ ದಿನ ಇಲ್ಲೆ ಇರು ಮ್ಯಾಚ್ ಆಡಲಿಲ್ಲ ಅಂದರೆ ದೇಶ ಮುಳುಗುವುದಿಲ್ಲ ಅಂದರು.ಅದಕ್ಕೆ ದಿವ್ಯಾ ಕೂಡ "ಹೌದು ಯಾವಾಗ ನೋಡಿದರು ಕ್ರ‍ಿಕೇಟ್ ಅನ್ನುವುದು ಬಿಟ್ಟರೆ ನಿನಗೆ ಬೇರೆ ಏನು ಗೊತ್ತಿಲ್ವಾ ಬರುವುದೇ ಅಪರೂಪ  ನೀನು ೨ ದಿನ ನಮ್ಮನೆಯಲ್ಲಿರು" ಅಂದಳು ಮಾವ ಸಹ "ಮನು ಹೋಗುವುದು ಬೇಡ" ಅಂದರು.ಒಳ್ಳೆ ಸಂಕಷ್ಟಕ್ಕೆ ಸಿಲುಕಿದ ಅನುಭವ ನನಗೆ. ನಮ್ಮ ಟೀಮ್ ಸೆಮಿಫೈನಲಿಗೆ ಹೋಗಿತ್ತು ಬೌಲರ್ ಆದ ನಾನು ಹೋಗಲೇಬೇಕಿತ್ತು.ಅದನ್ನು ಅತ್ತೆ ಮಾವನಿಗೆ ಹೇಳಿ ಒಪ್ಪಿಸಿದೆ.ಆದರೆ ಡುಮ್ಮಿ ಮಾತ್ರ ಸಿಟ್ಟುಮಾಡಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದಳು.ನಾನು ಎಷ್ಟೇ ಕರೆದರೂ ಮಾತಾಡಲಿಲ್ಲ.ನಾನು ಸಹ ಸುಮ್ಮನಾದೆ ನಾಳೆ ಮತ್ತೆ ಸರಿಯಾಗುತ್ತಾಳೆ ಅಂತ ಗೊತ್ತಿತ್ತು ಅದಕ್ಕೆ ಬೆಳಿಗ್ಗೆ ೫.೩೦ ಕ್ಕೆ ಅಲಾರಾಮ್ ಇಟ್ಟು ಮಲಗಿದೆ.
 ಅಲರಾಮ್ ಮೊಳಗಿತು ನಿದ್ದೆಕಣ್ಣಿನಲ್ಲಿಯೇ ಎದ್ದು ಬಾತರೂಮಿಗೆ ಹೋಗಿ ಹಲ್ಲುಜ್ಜಿ ಮುಖ ತೊಳೆದು ಬರುವಷ್ಟರಲ್ಲಿ ದಿವ್ಯಾ ಸಹ ಎದ್ದಿದಳು.ಕಿಚನ್ ನಲ್ಲಿ ಟೀ ಮಾಡಿ ತಂದುಕೊಟ್ಟಳು."ಸಾರಿ ಕಣೇ ಡುಮ್ಮಿ ಇನ್ನೊಂದು ಸಲ ಬಂದು  ಒಂದು ವಾರ ನಿಮ್ಮನೆಯಲ್ಲಿರುತ್ತೇನೆ ಆಯ್ತಾ ಬೇಜಾರುಮಾಡಿಕೊಳ್ಳಬೇಡ ಅಂದೆ.ದಿವ್ಯಾ ನನ್ನ ಹತ್ತಿರ ಬಂದು ಪ್ರೀತಿಯಿಂದ ಮೊದಲಬಾರಿಗೆ ನನ್ನನ್ನು ತಬ್ಬಿಕೊಂಡಳು.ನಾನು ಸುಮ್ಮನೆ ಹಾಗೆ ನಿಂತುಕೊಂಡೆ ಏನು ಮಾತನಾಡದೇ." ಐ ಲವ್ ಯೂ ಲೂಸು"ಅಂದಳು ಪ್ರೀತಿಯಿಂದ ನಾನು " ಐ ಲವ್ ಯೂ ಡುಮ್ಮಿ"ಅಂದೆ.ನಾವು ತಬ್ಬಿಕೊಂಡಿರುವುದು ಅತ್ತೆ ಮಾವ ನೋಡಿದರೆ ತಪ್ಪಾಗುತ್ತೆ ಅಂತ ಅವಳ ಹಣೆಗೆ ಸಿಹಿಮುತ್ತು ಕೊಟ್ಟು ಡುಮ್ಮಿ ಟೈಮ್ ಆಯ್ತು ಮತ್ತೆ ಬರುತ್ತಿನಿ ಅಂತ ಹೇಳಿ ಬಂದೆ ಆದರೆ ನನ್ನ ಮನಸ್ಸು ಅಲ್ಲೆ ಅವಳ ಹತ್ತಿರವೇ ಇತ್ತು.
 ಮೆಜಿಸ್ಟಿಕ್ ಹೋಗುವ ಬಿ.ಎಮ್.ಟಿ.ಸಿ.ಹತ್ತಿದೆ.ಬಸ್ಸು ತುಂಬಾ ಜನರಿದ್ದರು.ನಾನು ಮೊದಲಬಾರಿಗೆ ಅವಳ ಹಣೆಗೆ ಕೊಟ್ಟ ಸಿಹಿಮುತ್ತು ಮತ್ತು ಮೊದಲ ಆಲಿಂಗನದ ಸಿಹಿಘಳಿಗೆಯನ್ನು ನೆನಪುಮಾಡಿಕೊಳ್ಳುತ್ತ ಟಿಕೆಟ್ ಮಾಡುವುದೇ ಮರೆತುಬಿಟ್ಟಿದ್ದೆ.ಬಸ್ಸು ಹೋಗುತ್ತಿತ್ತು ನಾನು ಆ ಕನಸಲೇ ಇದ್ದೆ.ಯಶವಂತಪುರದ ಹತ್ತಿರ ಟಿಕೆಟ್ ಚೆಕ್ಕಿಂಗ್ ಅವರು ಹತ್ತಿ ಎಲ್ಲರ ಟಿಕೆಟ್ ಚೆಕ್ ಮಾಡುತ್ತಿದ್ದರು ನನಗೆ ಅವಾಗ ಸಹ ಗೊತ್ತಾಗಲಿಲ್ಲ ನಾನು ಇನ್ನು ಆ ಆಲಿಂಗನದ ನೆನಪಲೇ ಇದ್ದೆ.ನನ್ನ ಹತ್ತಿರ ಬಂದು ಟಿಕೆಟ್ ಕೇಳಿದಾಗಲೇ ಗೊತ್ತಾಗಿದ್ದು ನಾನು ಟಿಕೆಟ್ ಮಾಡಿಲ್ಲ ಅಂತ.ಒಂಥರಾ ನಾಚಿಕೆಯಾಯ್ತು.ಕಂಡಕ್ಟರ್ ತಪ್ಪಿಲ್ಲ ನಾನೇ ಟಿಕೆಟ್ ಮಾಡಿಲ್ಲ ದಂಡ ಕಟ್ಟುತ್ತೀನಿ ಅಂದೆ.ಅದಕ್ಕೆ ಚೆಕ್ಕಿಂಗ್ ಆಫೀಸರ್ ಇಲ್ಲಿ ಆಗುವುದಿಲ್ಲ ಡಿಪೋಗೆ ಬಾ ಅಲ್ಲಿ ಫೈನ್ ಕಟ್ಟು ಅಂದ ಆಕಾಶ ಕಳಚಿ ತಲೆಮೇಲೆ ಬಿದ್ದಹಾಗಾಯಿತು ಯಾಕೆಂದರೆ ನನಗೆ ಮೊದಲೇ ಮ್ಯಾಚಗೆ ಟೈಮ್ ಆಗಿತ್ತು.ಇ ಸಮಸ್ಯೆಯಿಂದ ಮತ್ತು ಲೇಟ್ ಆಯಿತು.ಕೊನೆಗೆ ತುಂಬಾ ಕೇಳಿಕೊಂಡ ಮೇಲೆ ಹಣ ತೆಗೆದುಕೊಂಡು ನನ್ನನ್ನು ಬಿಟ್ಟರು.ಅಲ್ಲಿಂದ ಆಟೋ ಮಾಡಿಕೊಂಡು ಜಯನಗರಕ್ಕೆ ಹೋಗಿ ಮ್ಯಾಚ್ ಆಡಿದೆ ನಮ್ಮ ತಂಡ ಜಯಗಳಿಸಿತು.
  ಪ್ರೀತಿ ಶುರುವಾಗಿ ಒಂದೆರೆಡು ದಿನಗಳಲ್ಲಿ ಮುತ್ತು,ಅಪ್ಪುಗೆಯಾಗುವ ಈ ಕಾಲದಲ್ಲಿ ನಾನು ಮೂರು ವರ್ಷಗಳ ನಂತರ ಅದು ಅವಳೇ ಬಂದು ತಬ್ಬಿಕೊಂಡಿದ್ದರಿಂದ ಮನಸ್ಸಿನ ಹಿಡಿತ ತಪ್ಪಿ ಒಂದು ಮುತ್ತು,ಆಲಿಂಗನ ಮಾಡಿದ್ದಕ್ಕೆ ೩೦೦ ರೂಪಾಯಿ ಬಿ.ಎಮ್.ಟಿ.ಸಿ.ಗೆ ದಂಡ ಕಟ್ಟಿದ್ದು,ಬೆಳಿಗ್ಗೆ,ಬೆಳಿಗ್ಗೆ ಚೆಕ್ಕಿಂಗ್ ಆಫೀಸರ್ ಹತ್ತಿರ ಉಗಿಸಿಕೊಂಡಿದ್ದು, ಅಲ್ಲದೇ ೨೫೦ ರೂಪಾಯಿ ಆಟೋ ಚಾರ್ಜ್ ಕೊಟ್ಟಿದ್ದು.ಒಂದೇ ಅಪ್ಪುಗೆಗೆ ಇಷ್ಟು ಸಮಸ್ಯೆಯಾಗಿದೆ ನನಗೆ.ಇನ್ನು ದಿನ ಅಪ್ಪುಗೆಯಲ್ಲಿರುವ ಹುಡುಗರ ಗತಿಯೇನು?
 ಮನಸ್ಸು ಹೇಳಿತು ಬೆಳಿಗ್ಗೆ ಬೆಳಿಗ್ಗೆ ಆಲಿಂಗನ ಬೇಕಿತ್ತಾ ನಿನಗೆ ಅಂತ ಕೇಳಿದ ಹಾಗಾಯಿತು.ಅತ್ತೆಗೆ ಪೋನ್ ಮಾಡಿ ನಿಮ್ಮ ಮಗಳನ್ನು ಒಂದು ಸಲ ತಬ್ಬಿಕೊಂಡಿದ್ದಕ್ಕೆ ಇಷ್ಟೇಲ್ಲಾ ಸಮಸ್ಯೆ ಆಯ್ತು ಇನ್ನು ಅವಳನ್ನು ಮದುವೆ ಮಾಡಿಕೊಂಡರೆ ಹೇಗೆ" ಅಂತ ನಗುತ್ತ ಹೇಳಿದೆ ಅದಕ್ಕೆ ಅತ್ತೆ ನಗುತ್ತ "ನಮ್ಮ ಕಣ್ಣು ತಪ್ಪಿಸಿ ಕದ್ದುಮುಚ್ಚಿ ತಬ್ಬಿಕೊಂಡರೆ ಹೀಗೆ ಆಗುವುದು ಮನು ಮದುವೆ ಮಾಡಿಕೊಂಡು ತಬ್ಬಿಕೊಂಡಿದ್ದರೆ ಏನು ಆಗುತ್ತಿರಲಿಲ್ಲ ಅಂದರು .ಅತ್ತೆಯ ಮಾತು ಸತ್ಯ ಅನಿಸಿತು.ಇನ್ನು ಡುಮ್ಮಿಯನ್ನು ಮದುವೆ ಆಗುವ ತನಕ ತಬ್ಬಿಕೊಳ್ಳುವುದಿಲ್ಲ,ಮುತ್ತು ಕೊಡುವುದಿಲ್ಲ ಅಂತ ಮನಸ್ಸಿನಲ್ಲಿ ನಿರ್ಧರಿಸಿಕೊಂಡು ಅತ್ತೆ ಮನೆಗೆ ಹೋಗುವ ವಿಚಾರ ಕೈಬಿಟ್ಟು ಕ್ರಿಕೇಟ್ ಆಡಲ್ಲಿಕ್ಕೆ ಹೊರಟೆ........

                                      ಎನ್.ರಾಜೇಶ್.ಕುಮಾರ್.ನೇರ‍ಳಕಟ್ಟೆ...



Tuesday, 19 March 2013

"ಪ್ರೀತಿ ಮಧುರ ತ್ಯಾಗ ಅಮರ"

  ತುಂಬಾ ವರ್ಷಗಳಿಂದ ಉದ್ಯೋಗ ಮತ್ತು ಸಂಬಳ ನೀಡುತ್ತಿದ್ದ ಕಂಪನಿ ಇತ್ತೀಚೆಗೆ ತುಂಬಾ ನಷ್ಟದಲ್ಲಿ ನಡೆಯುತ್ತಿದೆ.ಕಂಪನಿಯ ಮಾಲೀಕರು ಕಷ್ಟದಲ್ಲಿದ್ದಾರೆ ಎಂದು ಆ ಕಂಪನಿಯ ಉದ್ಯೋಗಿಗಳು ಒಂದು ತಿಂಗಳು ಸಂಬಳ ತ್ಯಾಗ ಮಾಡಿದರೆ ಮಾಲೀಕರು ಸ್ವಲ್ಪ ಸುಧಾರಿಸುತ್ತಾರೆ ಅಂತ ಎಲ್ಲರಿಗೂ ಗೊತ್ತು ಆದರೂ ಯಾರು ತಮ್ಮ ಸಂಬಳ ತ್ಯಾಗ ಮಾಡುವುದಕ್ಕೆ ಸಿದ್ಧರಿಲ್ಲ...
  ತುಂಬಾ ಕಷ್ಟದಲ್ಲಿರುವ ಪ್ರಾಣಸ್ನೇಹಿತನಿಗೆ ಸಹಾಯ ಮಾಡಿರುವ ಹಣವನ್ನು ಕೇಳದೇ ಆ ಹಣವನ್ನು ಕೊಡುವುದು ಬೇಡ ಅಂತ ತ್ಯಾಗ ಮಾಡುವುದಕ್ಕೆ ಯಾರು ಸಿದ್ಧರಿಲ್ಲ...
 ಆದರೆ ಎಲ್ಲರೂ ತಮ್ಮ ಪ್ರೀತಿಯನ್ನು ಅವಳಿಗೋಸ್ಕರ ಅವಳ ಮನೆಯವರಿಗೋಸ್ಕರ ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ ಅಂತ ದೊಡ್ಡದಾಗಿ ಎಲ್ಲರೆದುರು ತನ್ನ ತ್ಯಾಗವನ್ನು ಕೊಚ್ಚಿಕೊಳ್ಳುತ್ತಾರೆ.ಈ ತ್ಯಾಗ ಅನ್ನುವುದು ನಾವು ದೇವರಿಗೆ ಮುಡಿಕೊಡುತ್ತೇವೆ ಅಂತ ಹರಕೆ ಹೊತ್ತು ದೇವರಿಗೆ ಕೂದಲು ಕೊಟ್ಟ ಹಾಗೇ. ಕೂದಲು ಎಷ್ಟು ಸಲ ತೆಗೆದರು ಮತ್ತೆ ಬರುತ್ತದೆ ಅನ್ನುವುದು ಎಲ್ಲರಿಗೂ ಗೊತ್ತು ಅದಕ್ಕೆ ದೇವರಿಗೆ ಅದನ್ನೇ ಕೊಡುತ್ತಾರೆ, ಹಾಗೆಯೇ ಹಣ,ಕೆಲಸ ತ್ಯಾಗ ಮಾಡಿದರೆ ಮರಳಿ ಸಿಗುವುದಿಲ್ಲ ಅಂತ ಗೊತ್ತು.ಒಂದು ಪ್ರೀತಿ ಹೋದರೆ ಇನ್ನೊಂದು ಪ್ರೀತಿ ಸಿಗುತ್ತದೆ ಅನ್ನುವ ಅದಮ್ಯ ವಿಶ್ವಾಸ ಅದಕ್ಕೆ ಎಲ್ಲರೂ ಪ್ರೀತಿ ತ್ಯಾಗ ಮಾಡಲಿಕ್ಕೆ ಸಿದ್ಧರಿರುತ್ತಾರೆ ಅಷ್ಟೇ...
 "ಪ್ರೀತಿ ಮಧುರ ತ್ಯಾಗ ಅಮರ" ಅನ್ನುತ್ತ ಇನ್ನೊಂದು ಹುಡುಗಿಗೆ ಕಾಳು ಹಾಕುವುದಕ್ಕೆ ರೆಡಿಯಾಗುತ್ತಾರೆ ಪ್ರೀತಿಯನ್ನು ತ್ಯಾಗ ಮಾಡಿದವರು....


        ಎನ್.ಆರ್.ಕೆ.ನೇರಳಕಟ್ಟೆ...

Tuesday, 12 March 2013

" ನಾನು ನನ್ನ ಹೃದಯ"

ಕೆಲಸ ಮತ್ತು ಕ್ರಿಕೇಟ್ ಆಡುವ ಭರದಲ್ಲಿ ನನ್ನ ಹೃದಯವನ್ನು ಸರಿಯಾಗಿ ವಿಚಾರಿಸಿಕೊಳ್ಳಲೇ ಇಲ್ಲ.ಯಾಕೋ ಹೃದಯ ತುಂಬಾ ಮೌನವಾಗಿ ಬಿಟ್ಟಿದೆ.ಕಾರಣವೇ ತಿಳಿದಿಲ್ಲ.ಅದಕೋಸ್ಕರವೇ ಈ ದಿನ ಸಮಯ ತೆಗೆದುಕೊಂಡು ಹೃದಯವನ್ನು ಮಾತನಾಡಿಸಿದೆ. ಹಲೋ ಏನಾಯ್ತು ತುಂಬಾ ಮೌನವಾಗಿರುತ್ತಿಯ ನೀನು ಇತ್ತಿಚೆಗೆ ಅಂದಾಗ ಹೃದಯ ಬೇಸರದಲ್ಲಿ ಹೇಳಿತು ನನ್ನ ಜೊತೆ ಮಾತನಾಡಲು ಯಾರು ಇಲ್ಲ, ನನ್ನೊಡಲಿನ ಪಿಸುಮಾತನ್ನು ಹೇಳಲು ಇನ್ನೊಂದು ಹೃದಯ ಬೇಕು ಅಂದಿತು.ಅದಕ್ಕೆ ನಾನು ಹೇಳಿದೆ.ನಾನೇ ಇದ್ದಿನಲ್ಲಾ ನನ್ನ ಹತ್ತಿರವೇ ಹೇಳು ನಿನ್ನ ಪಿಸುಮಾತುಗಳನ್ನು.ಹೃದಯ ಸಿಟ್ಟಿನಲ್ಲಿ ಹೇಳಿತು ನೀನು ಯಾವಾಗ ನನ್ನ ಮಾತು ಕೇಳಿದ್ದಿಯಾ ಯಾವಾಗ ನೋಡಿದರೂ ಕ್ರಿಕೇಟ್ ಆಡುತ್ತಿಯಾ ಅದನ್ನು ಬಿಟ್ಟರೆ ಫೇಸಬುಕ್,ವಾಟ್ಸಫ್ ನಲ್ಲಿ ಬ್ಯುಸಿ ಇರುತ್ತಿಯಾ ನನ್ನ ಮಾತು ಕೇಳಲ್ಲಿಕೆ ನಿನಗೆ ಸಮಯವಾದರೂ ಎಲ್ಲಿದೆ ಅಂತ ವ್ಯಂಗ್ಯ ಮಾಡಿತು.ನನಗೂ ಹೌದು ಅನಿಸಿತು ಹೃದಯದ ಮಾತು.ಆಯ್ತು ಮಾರಾಯ ಈಗ ಬೇಕು ಅಂದ ಕೂಡಲೇ ನಿನಗೆ ಎಲ್ಲಿಂದ ತರುವುದು ಇನ್ನೊಂದು ಹೃದಯವನ್ನು ಅಂದೆ.ಅದಕ್ಕೆ ಹೃದಯ ನೀನು ಹತ್ತನೇಯ ತರಗತಿ ಪಾಸಾದಾಗಲೇ ನಿನಗೆ "ಹಾಸಿನಿ"ಯನ್ನು ತೋರಿಸಿದೆ.ನೀನು ಮಾತ್ರ ಅವಳನ್ನು ನೋಡದೇ ಆಟ ಆಡಿಕೊಂಡೆ ಕಾಲ ಕಳೆದೆ.ಪಿಯುಸಿಯಲ್ಲಿ ಸಿಕ್ಕ ಮುದ್ದು ಮುಖದ ಹುಡುಗಿ ಹಾಸಿನಿ ನೋಡಿದ ಕೂಡಲೇ ಮನಸ್ಸಿಗೆ ಇಷ್ಟವಾಗಿದ್ದಳು.ಪ್ರೀತಿಸಬೇಕು ಅಂದುಕೊಂಡಿದ್ದೆ ಆದರೆ ಕಾಲೇಜಿಗೆ ಸರಿಯಾಗಿ ಬರದೇ ಆಡುತ್ತಿದ್ದ ನನಗೆ ಅವಳು ನೆನಪಾಗಲೇ ಇಲ್ಲ.ಈಗ ಮತ್ತೆ ನೆನಪಾದಳು ಸ್ವಲ್ಪ ಫೀಲ್ ಆಯಿತು ಅಷ್ಟೇ.ಹಳೆಯದನ್ನು ಆಲೋಚಿಸುವುದರಿಂದ ಪ್ರಯೋಜನವಿಲ್ಲ ಅಂತ ಗೊತ್ತು ಅದಕ್ಕೆ ಅದನ್ನು ಅಲ್ಲೆ ಮರೆತು ನಾ ಹೇಳಿದೆ ಹೃದಯಕ್ಕೆ ನಾನು ಇರುವ ಚಂದಕ್ಕೆ ನನ್ನನ್ನು ನೋಡುವುದೇ ಕಷ್ಟ ಅಂಥದರಲ್ಲಿ ಯಾರು ಹೃದಯ ಕೊಡುತ್ತಾರೆ ಮಾರಾಯ ಅಂದೆ.ಹೃದಯ ಯಾವತ್ತು ಅಂದವನ್ನು ಬಯಸುವುದಿಲ್ಲ ತಿಳಿದುಕೊ. ನೀನೊಮ್ಮೆ ಹೃದಯಕ್ಕಾಗಿ ಪ್ರಯತ್ನಿಸು ಸಿಕ್ಕೆ ಸಿಗುತ್ತದೆ ಅನ್ನುವ ನಂಬಿಕೆಯಿದೆ ನನಗೆ ಅಂದಿತು ಹೃದಯ.ಹೃದಯಕ್ಕೆ ಇರುವ ನಂಬಿಕೆ ನನಗೆ ಇಲ್ಲವಾಗಿತ್ತು.ಆದರೂ ಹೃದಯದ ಖುಷಿಗಾಗಿ ಪ್ರಯತ್ನಿಸುತ್ತೇನೆ ಅಂದಾಗ.ಹೃದಯ ನಗುತ್ತ ನೀನು ಏನು ಪ್ರಯೋಜನಕ್ಕೆ ಬಾರದವ ಇಂದಿನ ಹುಡುಗರು ಎಂಟನೇಯ ತರಗತಿಯಿಂದ ಹೃದಯದ ಹುಡುಕಾಟ ಶುರುಮಾಡಿ ಮದುವೆಯಾಗುವುದರೊಳಗೆ ತಮ್ಮ ಹೃದಯಕ್ಕೆ ಹತ್ತಾರು ಹುಡುಗಿಯರ ಹೃದಯವನ್ನು ಪರಿಚಯಿಸುತ್ತಾರೆ ಅಂಥದರಲ್ಲಿ ನೀನು ಇದ್ದೀಯಾ ೨೫ ವರ್ಷ ಆಯಿತು ಇಲ್ಲಿ ತನಕ
ನನಗೆ ಒಂದು ಹೃದಯವನ್ನು ಪರಿಚಯಿಸಲಿಲ್ಲ ಕೇವಲ ಕ್ರಿಕೇಟ್ ಆಡಿ ಕಾಲ ಕಳೆದೆ ಎಂದು ಕುಹಕವಾಡಿತು.ಅದರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ.
ಹೃದಯದ ಮಾತು ಕೇಳಿದ ಮೇಲೆ ಅದಕೋಸ್ಕರ ಇನ್ನೊಂದು ಹೃದಯದ ಹುಡುಕಾಟ ಶುರುಮಾಡಿದೆ.ಬೇಕು ಅಂದಾಗ ದೊರೆಯಲು ಹೃದಯ ಅನ್ನುವುದು ಅಂಗಡಿಯಲ್ಲಿ ಮಾರಾಟ ಮಾಡುವ ವಸ್ತುವೇ..ಸಿಗಲಿಲ್ಲ ಅನ್ನುವುದಕ್ಕಿಂತ ಪ್ರಯತ್ನ ಮಾಡಲಿಲ್ಲ ಅನ್ನುವುದು ಸರಿ ಅನಿಸುತ್ತದೆ.ಕ್ರಿಕೇಟ್ ಆಡಿ ಬರುವಾಗ ರಸ್ತೆಯಲ್ಲಿ ಹುಡುಗಿಯರನ್ನು ನೋಡಿದಾಗ ಮಾತ್ರ ಹೃದಯದ ಮಾತು ನೆನಪಾಗುತ್ತಿತ್ತು.ಆಮೇಲೆ ಮತ್ತೆ ಮರೆತುಹೋಗುತ್ತಿತ್ತು.ಹೃದಯ ಮತ್ತೆ ಕೊರಗಲು ಶುರುಮಾಡಿತು.ನಾ ಹೇಳಿದೆ ನನ್ನ ಪ್ರಯತ್ನವೆಲ್ಲಾ ಮಾಡಿದೆ ಹೃದಯ ಸಿಗಲಿಲ್ಲ ಅದಕ್ಕೆ ನಾನು ಏನು ಮಾಡುವುದು ಮಾರಾಯ ಅಂದೆ.ಅದಕ್ಕೆ ಹೃದಯ ಗಂಟೆಗಟ್ಟಲೇ ಫೇಸಬುಕನಲ್ಲಿ ಇರುತ್ತಿಯಾ ಅಲ್ಲಾದರೂ ಪ್ರಯತ್ನಿಸು ಅಂದಿತು.ನನಗೂ ಸರಿ ಅನಿಸಿತು.
ಹೃದಯದ ಕಾಟ ತಾಳಲಾರದೇ ಫೇಸಬುಕ್ ನಲ್ಲಿ ಇರುವುದರಲ್ಲಿ ನೋಡಲ್ಲಿಕೆ ಸ್ವಲ್ಪ ಚಂದ ಇರುವ ಪೋಟೋ ಹಾಕಿದೆ.ಅಲ್ಲಿಯ ತನಕ ನನ್ನನ್ನು ಯಾರು ನೋಡಿರಲಿಲ್ಲ ಅಂತೂ ನನ್ನ ಮುಖದ ದರ್ಶನ ಫೇಸಬುಕ್ ಗೆಳೆಯರಿಗೆ ಆಯಿತು.ನಾ ಹಾಕಿದ ನನ್ನ ಪೋಟೊಗೆ ಸುಮಾರು ೨೦ ಲೈಕ್ ಮತ್ತು ೧೦ ಕಮೆಂಟ್ಸ್ ಬಂದಿತು.ನೋಡಿ ಸ್ವಲ್ಪ ಖುಷಿಯಾಯಿತು.ಯಾರು ಯಾರು ಲೈಕ್ ಮಾಡಿದ್ದು ಅಂತ ನೋಡಿದಾಗ ಬರೇ ಹುಡುಗರು ಒಂದೇ ಒಂದು ಹುಡುಗಿ ನನ್ನ ಪೋಟೊ ಲೈಕ್ ಮಾಡಿರಲಿಲ್ಲ ತುಂಬಾ ಬೇಸರವಾಯಿತು.ನನ್ನ ಹತ್ತಿರ ಹೃದಯ ಹುಡುಕಲ್ಲಿಕ್ಕೆ ಆಗದ ಕೆಲಸ ಅಂತ ಗೊತ್ತಾಯಿತು.ಅದಕ್ಕೆ ಹೃದಯದ ಹತ್ತಿರ ಸಾರಿ ಕೇಳಿ ನನ್ನ ಹತ್ತಿರ ನಿನಗೆ ಹೃದಯ ಹುಡುಕುವುದಕ್ಕೆ ಆಗುವುದಿಲ್ಲ ಮಾರಾಯ ಅಂದಾಗ.ಹೃದಯ ನಗುತ್ತ ಅದು ನನಗೆ ಮೊದಲೇ ಗೊತ್ತಿತ್ತು ನಿನ್ನ ಹತ್ತಿರ ಆಗದ ಕೆಲಸವೆಂದು ಆದರೂ ನಿನ್ನನ್ನು ಪರೀಕ್ಷಿಸುವ ಅಂತ ಮಾಡಿದೆ ಅದರಲ್ಲಿ ನೀನು ಫೇಲಾದೆ.ನೀನು ಹೃದಯದ ಹುಡುಕುವುದು ಬಿಟ್ಟು ಮದುವೆಯಾಗು. ನಿನ್ನ ಹೆಂಡತಿಯಾಗಿ ಬರುವ ಹುಡುಗಿಯ ಹೃದಯದ ಜೊತೆ ನನ್ನ ಇಷ್ಟು ವರ್ಷದ ತನ್ನೊಡಲಿನ ಪಿಸುಮಾತುಗಳನ್ನು ಅವಳಲ್ಲಿ ಹೇಳಿ ಸಂಭ್ರಮಿಸುತ್ತೇನೆ ಅಂದಾಗ ನನಗೆ ತುಂಬಾ ಖುಷಿ ಆಯಿತು ಅಂತೂ ಹೃದಯದ ಕಾಟ ತಪ್ಪಿತು ಅಂತ..
ಆದರೂ ಮನ್ನಸ್ಸಿನಲ್ಲಿ ಒಂದು ನೋವು ಕಾಡುತ್ತಿತ್ತು.ನಾನು ಅಷ್ಟೋಂದು ಕುರೂಪಿನಾ..? ಒಂದೇ ಒಂದು ಹುಡುಗಿ ನನ್ನ ಪೋಟೊವನ್ನು ಲೈಕ್ ಮಾಡಿರಲಿಲ್ಲ.ಅದಕ್ಕೆ ಕಾರಣವೇನು ಅಂತ ಚಿಂತಿಸುತ್ತಿದ್ದೆ.ಕನ್ನಡಿಯ ಮುಂದೆ ನಿಂತು ನನ್ನನ್ನು ನೋಡಿದೆ ನೋಡಲ್ಲಿಕ್ಕೆ ಅಷ್ಟೊಂದು ಚಂದವಿಲ್ಲ ನಿಜ ಆದರೆ ನೋಡದೇ ಇರುವಷ್ಟು ಕೆಟ್ಟದಾಗಿರಲಿಲ್ಲ ನನ್ನ ಮುಖ .ಯಾಕೆ ಹೀಗಾಯ್ತು ಅಂತ ಫೇಸಬುಕನಲ್ಲಿ ಮತ್ತೆ ಹುಡುಕಿದೆ.ಗೆಳೆಯರು ಯಾರು ಯಾರು ಅಂತ ಚೆಕ್ ಮಾಡಿದಾಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.ಯಾಕೆಂದರೆ ನನ್ನ ಫ್ರೆಂಡ್ಸ್ ಲಿಸ್ಟನಲ್ಲಿ ಒಂದೇ ಒಂದು ಹುಡುಗಿ ಇರಲಿಲ್ಲ.ಯಾವ ಹುಡುಗಿಯು ನನ್ನ ಪೋಟೊ ನೋಡಿಲ್ಲ ಅದಕ್ಕೆ ಯಾರು ಲೈಕ್ ಮಾಡಿಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಖುಷಿಪಟ್ಟೆ...ಮತ್ತೆ ಕ್ರಿಕೇಟ್ ಆಡಲ್ಲಿಕ್ಕೆ ಹೊರಟೆ ನೆಮ್ಮದಿಯಿಂದ.....

                                       ಎನ್.ಆರ್.ಕೆ.ನೇರಳಕಟ್ಟೆ....

Saturday, 9 March 2013

"ಹನಿಗವನಗಳು"

1)
ತನಗೊಪ್ಪುವ
ಹೃದಯದ
ಹುಡುಕಾಟದಲ್ಲಿದೆ
ನನ್ನ ಹೃದಯ
ತನ್ನೊಡಲಿನಲಿ ತುಂಬಿರುವ
ಪ್ರೇಮಧಾರೆಯನು ನೀಡಲು...

ಎನ್.ಆರ್.ಕೆ.ನೇರಳಕಟ್ಟೆ....


2)
ನನ್ನೊಲುಮೆಯ ನೆನಪೇ
ಮೋಸಹೋದ ಹಳೆಯ
ನೆನಪುಗಳನ್ನು ಮತ್ತೆ ಮತ್ತೆ
ನೆನಪಿಸಿ ಭಯಪಡಿಸಬೇಡ
ಯಾಕೆಂದರೆ
ನಾನು ಮತ್ತೆ ಪ್ರೀತಿ
ಮಾಡಬೇಕು ಅಂದುಕೊಂಡಿದ್ದೀನಿ...

ಎನ್.ಆರ್.ಕೆ.ನೇರಳಕಟ್ಟೆ


3)
ಪ್ರೀತಿಯ ಅರ್ಥ ಗೊತ್ತಾ
ಅಂತ ಕೇಳಿದೆ ನೀನು
ಪ್ರೀತಿ ಅಂದರೆ ಏನು ಅಂತ
ಮೊದಲೇ ಗೊತ್ತಿದ್ದರೆ
ನಾನೇಕೆ
ನಿನ್ನನ್ನು ಪ್ರೀತಿಸುತ್ತಿದ್ದೆ.....

ಎನ್.ಆರ್.ಕೆ.ನೇರಳಕಟ್ಟೆ...


4)
ನಗು ಎಲ್ಲರಿಗೂ ಒಳ್ಳೆಯದನ್ನೇ
ಮಾಡುತ್ತದೆ ಅನ್ನುತ್ತಾರೆ
ಆದರೆ
ಹುಡುಗಿಯರ ನಗು ಹುಡುಗರ
ಜೀವನವನ್ನೇ ಸರ್ವನಾಶ
ಮಾಡುತ್ತಿದೆಯೆಲ್ಲಾ.....

ಎನ್.ಆರ್.ಕೆ.ನೇರಳಕಟ್ಟೆ...


5)
"ಮನಸ್ಸಿನ ಮಾತು ಕೇಳು ಅಂದರು
ಕೇಳಿದೆ
ಪರಿಣಾಮ
ನೂರಾರು ಗರ್ಲ್ ಫ್ರೆಂಡ್ಸಗಳು...."

ಎನ್.ಆರ್.ಕೆ.ನೇರಳಕಟ್ಟೆ..


6)
ಇಷ್ಟ ಬಂದಾಗ ತೆಗೆದುಕೊಂಡು
ಬೇಡವಾದಾಗ ಮರಳಿ ಕೊಡಲು
ಪ್ರೀತಿ ಅನ್ನುವುದು ಹಳೆಯ ಸಾಲವೇ...?

 ಎನ್.ಆರ್.ಕೆ.ನೇರಳಕಟ್ಟೆ....


7)
ಮನಸ್ಸಿನಲ್ಲಿ ಮೊದಲೇ ಒಬ್ಬರೋ ಇಬ್ಬರನ್ನು
ಇಷ್ಟಪಟ್ಟಿರುತ್ತಾರೆ ಆದರೂ
ಇನ್ನೋಬ್ಬರನ್ನು ಆಕರ್ಷಿಸಬೇಕೆನ್ನುವ
ಹುಚ್ಚು ಬಯಕೆ ಇಂದಿನ ಹುಡುಗ-ಹುಡುಗಿಯರಿಗೆ....
  

 -ಎನ್.ಆರ್.ಕೆ.ನೇರಳಕಟ್ಟೆ...

8)
ಹೆಣ್ಣಿನ ಮನಸ್ಸು
ಕತ್ತಲೆಯ ಕೋಣೆಯಂತೆ
ಎಷ್ಟು ನೋಡಿದರೂ
ಒಳಗಿರುವ
ಒಳ್ಳೆಯತನ, ಕೆಟ್ಟತನ
ಏನೂ ಕಾಣಿಸದು ಯಾರಿಗೂ..

-ಎನ್.ಆರ್.ಕೆ.ನೇರಳಕಟ್ಟೆ.. 

9)
" ಸಾಕು ನಾಯಿ"

 ನನ್ನ ಕಥೆ,ಕವನಗಳು
 ಸಾಕುನಾಯಿಯ ತರಹ
 ಎಲ್ಲಿಗೆ ಕಳುಹಿಸಿದರೂ
 ಮರಳಿ ನನ್ನ ಬಳಿಗೆ
 ತಿರುಗಿ ಬರುತ್ತವೆ....

    ಎನ್.ಆರ್.ಕೆ.ನೇರಳಕಟ್ಟೆ...

10)
"ಸಮಾಧಿ"

ಪ್ರೀತಿಸಿದವಳ ಗೋರಿಯ ಮುಂದೆ
ಅಳುತ್ತ ಮನೆಯವರನ್ನು
ದೂರ ಮಾಡಿಕೊಂಡು
ಹಳೆಯ ನೆನಪುಗಳನ್ನು ನೆನಪಿಸಿಕೊಂಡು
ಜೀವನಪೂರ್ತಿ ಕಾಲ ಕಳೆದ
ನನಗೆ ತಿಳಿಯಲೇ ಇಲ್ಲ
ನಾ ಸತ್ತಾಗ ನನ್ನ ಸಮಾಧಿಯ ಮುಂದೆ
ಅಳುವವರು ಯಾರು ಇಲ್ಲ ಅಂತ....

       ಎನ್.ಆರ್.ಕೆ.ನೇರಳಕಟ್ಟೆ... 


11)

ಆರೋಗ್ಯವಂತರು
ಹಣಕ್ಕಾಗಿ
ಹೋರಾಡುತ್ತಾರೆ...
ಆರೋಗ್ಯವಿಲ್ಲದವರು
ಬದುಕುವುದಕ್ಕಾಗಿ
ಹೋರಾಡುತ್ತಾರೆ..

    ಎನ್.ಆರ್.ಕೆ.ನೇರಳಕಟ್ಟೆ...


12)

           "ಗ್ರಹಚಾರ"
ಪ್ರೀತಿಗೆ ಮೋಸ
ಮಾಡಿಹೋದವಳ
ಹೆಸರನ್ನು
ಮರೆಯಲು ಆಗದೇ
ಒದ್ದಾಡುತ್ತಿದ್ದ
ನನಗೆ ಅಮ್ಮ ನೋಡಿ
ನಿಶ್ಚಯ ಮಾಡಿದ
ಹುಡುಗಿಯ ಹೆಸರು
ಮೋಸಮಾಡಿ
ಹೋದವಳ ಹೆಸರು
ಒಂದೇ ಆಗಿರಬೇಕೇ...?

  ಎನ್.ಆರ್.ಕೆ.ನೇರಳಕಟ್ಟೆ..
 

13)

ನಿನ್ನೆ ಓದಿದ್ದು,
ನೋಡಿರುವುದನ್ನು
ಇಂದು ಮರೆಯುವ ಮಹಾ
ಮರೆಗುಳಿ ನಾ
ಆದರೆ
ವರ್ಷಗಳೇ ಉರುಳಿಹೋದರೂ
ನೀನು,ನಿನ್ನ ನೆನಪುಗಳು
ನನ್ನ ಮನದಲ್ಲಿ
ಅಚ್ಚಳಿಯದಂತೆ ಉಳಿದಿದೆ
ಇನ್ನು ಮರೆಯಾಗದೇ.....

   ಎನ್.ಆರ್.ಕೆ.ನೇರಳಕಟ್ಟೆ....


14)


 ಮನಸಾರೆ ಇಷ್ಟಪಟ್ಟ
 ಹುಡುಗಿಗೆ ನಾ ಕೊಟ್ಟ
 ಪ್ರಪ್ರಥಮ ಉಡುಗೊರೆ
 ಪುಸ್ತಕ
 "ಹೇಳಿ ಹೋಗು ಕಾರಣ"
 ಆದರವಳು ಕೊನೆಗೂ
 ಕಾರಣವೇ
 ಹೇಳದೆ ಇನ್ನೊಬ್ಬನ
 ಕೈ ಹಿಡಿದು ಹೋದಳು....

       ಎನ್.ಆರ್.ಕೆ.ನೇರಳಕಟ್ಟೆ....
 

  

Friday, 1 March 2013

"ಜೀವನ"

ನಮ್ಮ ಜೀವನವೇನು ಶಾಶ್ವತವೇ?
ಕಾಲನ ಕರೆ ಎಲ್ಲಿ ಯಾವಾಗ
ಬರುವುದೋ ನಮಗೆ ತಿಳಿದಿಲ್ಲ
ಬದುಕೇ ಕ್ಷಣಿಕವಾಗಿರುವಾಗ
ಜೀವನದಲ್ಲಿ ಬರುವ ನೋವು
ನಮಗೆ ಯಾವ ಲೆಕ್ಕ
ದಿನ ಬದಲಾಗುವಂತೆ
ಸಂತಸ, ನೋವುಗಳು
ಬದಲಾಗುತ್ತವೆ
ಆದರೆ ನಾವು ಕೇವಲ
ನೋವುಗಳನ್ನು ನೆನೆಯುತ್ತಾ
ದುಃಖಪಡುವುದು ನಮಗೆ
ನಾವೇ ಮಾಡಿಕೊಳ್ಳುತ್ತಿರುವ ಅನ್ಯಾಯ....

        ಎನ್.ಆರ್.ಕೆ.ನೇರಳಕಟ್ಟೆ....


Friday, 22 February 2013

"ಮೋಸಹೋದ ಹೃದಯ."


"ನಾನು ನಿನ್ನ ಮರೆತಿದ್ದೇನೆ
 ನನ್ನ ಜೀವನಕ್ಕೆ ಮತ್ತೆ ಬರಬೇಡ ಎಂದು
 ಎಷ್ಟು ಸುಲಭವಾಗಿ ಹೇಳಿ ಐದು
 ವರ್ಷದ ಪ್ರೀತಿ ಮರೆತು ಇನ್ನೊಬ್ಬನ
 ಕೈ ಹಿಡಿದು ಹೋಗುತ್ತಿದ್ದೀಯ...

 ನಿನ್ನಂಥ
 ಮೋಸಗಾತಿಯನ್ನು ನೆನೆದು
 ಕೊರಗುವ ಪ್ರೇಮಿ ನಾನಲ್ಲ...

 ನಿನ್ನ ಬಣ್ಣ  ಬಣ್ಣದ ಮಾತಿಗೆ
 ಮರುಳಾಗಿ ಮನೆಯವರ  ವಿರೋಧ
 ಲೆಕ್ಕಿಸದೇ ನಿನ್ನನ್ನು ನಂಬಿ
 ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದೆ
 ಅದೇ ನೋವು ನನ್ನ ತುಂಬಾ ಕಾಡುತ್ತಿದೆ..

 ಪ್ರೀತಿಗೆ ಮೋಸ ಮಾಡಿ ಹೋದ ನಿನಗೆ
 ಇನ್ನೊಬ್ಬ ಹುಡುಗ ಸಿಗಬೇಕಾದರೆ
 ಪ್ರೀತಿಯೇ ದೇವರು ಅಂದುಕೊಂಡಿದ್ದ ನನಗೆ
 ನಿನಗಿಂತ ಒಳ್ಳೆಯ ಹುಡುಗಿ ಸಿಗದೇ ಇರುತ್ತಾಳಾ?.....

             -ಮೋಸಹೋದ ಹೃದಯ...

             -ಎನ್. ಆರ್. ಕೆ. ನೇರಳಕಟ್ಟೆ

Saturday, 19 January 2013

"ತಪ್ಪು ಯಾರದು?"



ಮೋಸ ಮಾಡಿದ್ದು ಅವಳಲ್ಲ
ನಾನೇ ಮೋಸ ಹೋದೆ ಅದು
ನಿಮ್ಮಿಂದಲೇ ಅಂತ ಕಣ್ಣು,
ಮನಸ್ಸು,ಹೃದಯದ ಮೇಲೆ ಕೂಗಾಡಿದೆ
ಸುಮ್ಮನೆ ಹೋಗುತ್ತಿದ್ದ ನನ್ನನ್ನು ಅವಳನ್ನು
ನೋಡು ನೋಡು ಅಂದಿದ್ದು ಮನಸ್ಸು ಅದಕ್ಕೆ
ನೋಡಿದೆ ತಪ್ಪು ನನ್ನದಿಲ್ಲ ಅಂದಿತು ಕಣ್ಣು...

ನಾನು ರಸ್ತೆಯಲ್ಲಿ ಹೋಗುವವರನ್ನೇಲ್ಲಾ
ನೋಡು ಅಂತ ಹೇಳುತ್ತೀನಿ ಆದರೆ
ಪ್ರೀತಿಸು ಅಂದಿಲ್ಲ ಅವಳಿಗೆ
ನಿನ್ನೆದೆಯಲ್ಲಿ ಜಾಗ ಕೊಟ್ಟಿದ್ದು
ಹೃದಯ ತಪ್ಪೆಲ್ಲ ಅವನದೇ
ನನ್ನ ತಪ್ಪಿಲ್ಲ ಅಂದಿತು ಮನಸ್ಸು....

ನನ್ನ ಮಾತು ಕೇಳುತ್ತಿರಲಿಲ್ಲ ನೀನು
ಒಬ್ಬನೇ ಇದ್ದು ಇದ್ದು ಬೇಸರವಾಗಿತ್ತು
ಪ್ರೀತಿಯ ಪ್ರಪಂಚ ನಿನಗೆ
ತೋರಿಸುವ ಆತುರದಲ್ಲಿ
ನೋಡಲು ಮುಗ್ಧವಾಗಿದ್ದ ಅವಳು ನಿನಗೆ
ಸರಿಯಾದ ಜೋಡಿ ಆಗುತ್ತಾಳೆಂಬ
ನಂಬಿಕೆಯಲ್ಲಿಜಾಗ ಕೊಟ್ಟಿದ್ದು
ನನ್ನದೇ ತಪ್ಪು ಆದರೆ ನೀನು
ಮೋಸ ಹೋಗಲೂ ನಿನ್ನ ಅತಿಯಾದ
ನಂಬಿಕೆ ಮತ್ತು ಪ್ರೀತಿಯೇ
ಕಾರಣ ನನ್ನದೇನು 
ತಪ್ಪಿಲ್ಲ ಅಂದಿತು ಹೃದಯ.....

ಹೌದು ನನಗೆ ಮೋಸ ಮಾಡಿ
ಹೋದವಳನ್ನು ಮರೆಯುವ ಬದಲು
ಅವಳನ್ನು ಪದೇ ಪದೇ
ನೆನಪಿಸಿಕೊಳ್ಳುವ ನಾನೇ ತಪ್ಪು
ಮಾಡುತ್ತಿರುವುದು
ತಪ್ಪೆಲ್ಲ ನನ್ನದೇ....
          
          - ಎನ್.ರಾಜೇಶ್.ಕುಮಾರ್.ನೇರಳಕಟ್ಟೆ...

Monday, 14 January 2013

"ಶ್ರೇಷ್ಠ ಜೀವಿ"



ಶ್ರೀಮಂತರ ಮನೆಯ ನಾಯಿಗೆ
ಸಿಗುವ ಗೌರವ ಆ ಮನೆ ಕಾಯುವ
ಕೆಲಸಗಾರನಿಗೆ ಇಲ್ಲ
ಆದರೂ ಮನುಷ್ಯ ಶ್ರೇಷ್ಠ ಜೀವಿ....?

ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ
ಮಕ್ಕಳ ಆಸೆಗಳನ್ನು ಪೂರೈಸಿ
ಅವರ ಸಂತೋಷದಲ್ಲಿ ತಮ್ಮ ಸಂತೋಷ ಕಾಣುವ
ಮುದಿ ತಂದೆ-ತಾಯಿಯರನ್ನು ನೋಡಿಕೊಳ್ಳದೇ
ಕೊನೆಯ ಕಾಲದಲ್ಲಿ ನೆಮ್ಮದಿ ನೀಡದೇ ವೃದ್ಧಾಶ್ರಮಕ್ಕೆ
ಕಳುಹಿಸುವ ನಾವು ಶ್ರೇಷ್ಠ ಜೀವಿಗಳು....?

ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆದು
ಆ ಹಣದಲ್ಲಿ ಬದುಕುವ,
ಮನಸ್ಸಿನಲ್ಲಿ ಬರಿ ಕೆಟ್ಟದು ತುಂಬಿಕೊಂಡು
ಎದುರಿಗೆ ನಗು ನಗುತ್ತ ಮಾತಾಡಿ ಮೋಸ ಮಾಡುವ
ಮನುಷ್ಯರು ಶ್ರೇಷ್ಠ ಜೀವಿಗಳು...?

ಸಂಬಂಧಗಳಿಗೆ ಬೆಲೆಕೊಡದೇ
ಹಣಕ್ಕೆ ಬೆಲೆಕಟ್ಟುವ,
ಹಣಕ್ಕಾಗಿ ಸ್ವಂತ ಅಪ್ಪ-ಅಮ್ಮ ಅಣ್ಣ-ತಮ್ಮಂದಿರನ್ನು
ಕೊಲೆ ಮಾಡುವ ನಾವು ಶ್ರೇಷ್ಠ ಜೀವಿಗಳು...?

ದೇವರ ಹೆಸರಿನಲ್ಲಿ ಮೂಢನಂಬಿಕೆಯನ್ನು ಬೆಳೆಸಿ
ಪ್ರಾಣಿಬಲಿ-ನರಬಲಿ ಕೊಡುವ,
ಕಳ್ಳ ಕಪಟ ಸನ್ಯಾಸಿಗಳನ್ನು ದೇವರು ಅಂತ
ನಂಬಿ ತಮ್ಮದೆಲ್ಲಾ ಕೊಟ್ಟು ಮೋಸ ಹೋಗುವ
ನಾವು ಶ್ರೇಷ್ಠ ಜೀವಿಗಳು....?

ಹಸಿವೆಯಿಂದ ಬಳಲುತ್ತಿದ್ದರೂ
ಪ್ರಾಣಿ-ಪಕ್ಷಿಗಳು ಮಾಡಿಕೊಳ್ಳುವುದಿಲ್ಲ
ಆತ್ಮಹತ್ಯೆ..
ಕೋಟಿಕೋಟಿ ಹಣ ಇದ್ದರೂ
ಒಂದು ಸಮಸ್ಯೆ ಬಂದರೆ ಅದನ್ನು
ಎದುರಿಸಲಾಗದೆ ಮನುಷ್ಯ ಮಾಡಿಕೊಳ್ಳುತ್ತಾನೆ
ಆತ್ಮಹತ್ಯೆ ಇಲ್ಲದಿದ್ದರೆ ಮಾಡುತ್ತಾರೆ
ಇನ್ನೊಬ್ಬರ ಹತ್ಯೆ..
ಆದರೂ ಮನುಷ್ಯ ಶ್ರೇಷ್ಠ ಜೀವಿ...?

      ಎನ್.ಆರ್.ಕೆ.ನೇರಳಕಟ್ಟೆ...

Friday, 11 January 2013

"ಪಯಣ"

ಇಷ್ಟಪಟ್ಟ ಹುಡುಗಿಯ ಜೊತೆ
ಪ್ರೀತಿಯೆಂಬ ಬಸ್ಸು ಏರಿ
ಪಯಣ ಶುರುಮಾಡಿದೆ
ಪ್ರೀತಿಯ ಹುಡುಗಿ ಜೊತೆಯಲ್ಲಿರುತ್ತಾಳೆಂಬ
ಧೈರ್ಯದಲ್ಲಿ ಕಣ್ಣುಮುಚ್ಚಿ ಕನಸು
ಕಾಣತ್ತಿದ್ದೆ ಜೀವನದ ಬಗ್ಗೆ.....

ಆದರವಳು ಮಧ್ಯೆದಾರಿಯಲ್ಲಿ
ಸಿಕ್ಕ ಇನ್ನೊಬ್ಬನ ಜೊತೆ ಇಳಿದುಹೋಗಿದ್ದು
ನನಗದು ತಿಳಿಯಲೇ ಇಲ್ಲ....

ಕಣ್ಣು ತೆರೆದು ನೋಡಿದಾಗ
ವಾಪಾಸು ಬರಲಾರದಷ್ಟು ದೂರ ಬಂದು
ದೊಡ್ಡ ಕಣಿವೆಯ ಎದುರು ಪ್ರೀತಿಯ ಬಸ್ಸು ನಿಂತಿತ್ತು
ಮುಂದೆ ಹೋಗಲ್ಲಿಕೆ ದಾರಿಯಿಲ್ಲ
ಹಿಂದೆ ಬರಲ್ಲಿಕ್ಕೂ ತಿರುವು ಇಲ್ಲ
ಆ ಪ್ರೀತಿಯೆಂಬ ಬಸ್ಸಲ್ಲಿ ನನ್ನ ತರದವರೇ
ತುಂಬಾ ಜನ ಇದ್ದರು
ಪ್ರೀತಿಸಿದವಳು ಮೋಸ ಮಾಡಿದಳೆಂದು
ಏನು ಸಹ ಆಲೋಚಿಸದೇ
ಅದೇ ಕಣಿವೆಗೆ ಹಾರಿ ಪ್ರಾಣಬಿಟ್ಟರೆ
ಇನ್ನುಳಿದವರು ಹಿಡಿಶಾಪ ಹಾಕುತ್ತಿದ್ದರು
ಪ್ರೀತಿಗೆ ಪ್ರೀತಿಸಿದವಳಿಗೆ...

ನಾನು ಮೋಸಮಾಡಿದವಳಿಗೋಸ್ಕರ
ಸಾಯದೇ ಕೊರಗದೇ
ಮರಳಿ ಹಳೆಯ ಜೀವನಕ್ಕೆ
ತಿರುಗಿ ಹೋಗಲೂ
ದೇವರು ಕಾಲುದಾರಿಯನ್ನಾದರೂ
ಇಟ್ಟಿರುತ್ತಾನೆ ಅನ್ನುವ
ನಂಬಿಕೆಯಲ್ಲಿ ಕಗ್ಗಾಡಿನಲ್ಲಿ
ದಾರಿ ಹುಡುಕುತ್ತ ನಡದೇ ಒಬ್ಬಂಟಿಗನಾಗಿ

                  ಎನ್.ಆರ್.ಕೆ.ನೇರಳಕಟ್ಟೆ...

Sunday, 6 January 2013

"ನನಸಾದ ಕನಸು"

      
    ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿರುವ ಭಾರತಕ್ಕೆ ಹೋಗುವ ವಿಮಾನವೇರಿದೆ.೨ ವರ್ಷದ ನಂತರ ಅಮೇರಿಕಾಕ್ಕೆ ಗುಡ್ ಬೈ ಹೇಳಿ ತಾಯಿನಾಡಾದ ಭಾರತಕ್ಕೆ ಹೊಗುತ್ತಿದ್ದೇನೆ..ನಾಳೆ ಅಂದರೆ ಹಳೆಯ ಗೆಳೆಯರನ್ನು, ಮನೆಯವರನ್ನು ಕಾಣಬಹುದು ಅನ್ನುವ ಖುಷಿ ಒಂದೆಡೆ ಆದರೆ ಊರಿಗೆ ಬಂದ ಕೂಡಲೇ ಮದುವೆ ಆಗು ಅಂತ ಹೇಳುತ್ತಿರುವ ಅಮ್ಮನಿಂದ ನಾನು ಮದುವೆಯಾಗುವುದಿಲ್ಲ ಅಂತ ಹೇಳುವುದು ಹೇಗೆ ಅನ್ನುವ ಭಯ ಇನ್ನೊಂದು ಕಡೆ..
    ಅಪ್ಪ ಅಮ್ಮನ ಬಿಟ್ಟು ಇಷ್ಟು ದೂರ ೨ ವರ್ಷ ಯಾಕಾಗಿ ಇದ್ದೆ ಎಂದು ಆಲೋಚನೆ ಮಾಡಿದಾಗ ಕಣ್ಣುಮುಂದೆ ಬಂದಿದ್ದೆ ತನ್ನ ಪ್ರೀತಿ ಮತ್ತು ಪ್ರೀತಿಸಿದವಳು..ಅಮ್ಮ ಮದುವೆಯಾಗು ಅಂದಾಗೆಲ್ಲಾ ಕಣ್ಣುಮುಂದೆ ಬರುತ್ತಿದ್ದ ಹುಡುಗಿ" ಹಾಸಿನಿ".ತಾನು ಮನಸಾರೆ ಇಷ್ಟಪಟ್ಟು ಪ್ರೀತಿಸಿದ ಹುಡುಗಿ.ನನ್ನದು ಒಂದು ಸೈಡ್ ಲವ್ ಆಗಿತ್ತು.ನಾನು ಅವಳನ್ನು ೩ ವರ್ಷದಿಂದ ಪ್ರೀತಿಸುತ್ತಿದ್ದೇನೆ ಆದರೆ ಅವಳಿಗೆ ನಾನು ಪ್ರೀತಿಸುತ್ತಿರುವ ವಿಷಯ ಹೇಳಿರಲಿಲ್ಲ.ಯಾಕೆಂದರೆ ಮನೆಯ ಹತ್ತಿರದ ಹುಡುಗಿ.ಅವಳ ತಂದೆ ನಮ್ಮ ತಂದೆ ಪ್ರಾಣ ಸ್ನೇಹಿತರು.ನನ್ನ ಈ ಪ್ರೀತಿಯ ವಿಷಯದಿಂದ ಅವರುಗಳು ಬೇರೆಯಾಗುವುದು ನನಗೆ ಇಷ್ಟವಿರಲಿಲ್ಲ ಅದು ಅಲ್ಲದೆ ಅವಳಿಗೆ ನನ್ನ ಪ್ರೀತಿಯ ವಿಷಯ ಹೇಳಿದಾಗ "ನೀನಂದ್ರೆ ನನಗಿಷ್ಟವಿಲ್ಲ ಅಂದರೆ ಅವಳ ಎದುರು ಅಸಹಾಯಕನಾಗಿ ನಿಲ್ಲುವ ಪರಿಸ್ಥಿತಿ ನೆನೆದು ಭಯಬಿದ್ದು ಅವಳಿಗೂ ಹೇಳಿರಲಿಲ್ಲ.ಹೇಳದೆ ಇದ್ದಿದ್ದಕ್ಕೆ ನನಗೆ ತಕ್ಕಶಾಸ್ತಿ ಆಯ್ತು ಅವಳಿಗೆ ಮನೆಯಲ್ಲಿ ಬೇರೆ ಹುಡುಗನನ್ನು ನೋಡಿದರು.
   ಅದೇ ಸಮಯದಲ್ಲಿ ನನಗೆ ವಿದೇಶಕ್ಕೆ ಹೋಗುವ ಅವಕಾಶ ದೊರಕಿತು.ಬೇರೆ ಸಮಯದಲ್ಲಾಗಿದ್ದರೆ ಹೋಗುತ್ತಿರಲಿಲ್ಲವಾಗಿತ್ತು.ಪ್ರೀತಿಸಿದ ಹುಡುಗಿಯ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು ಅವಳ ಮದುವೆಯನ್ನು ನೋಡುವುದು ಹೇಗೆ ಅಂದುಕೊಂಡು ಸಿಕ್ಕ ಅವಕಾಶವನ್ನು ಬಿಡದೆ ತನ್ನ ಪ್ರೀತಿಯನ್ನು ಪ್ರೀತಿಸಿದವಳನ್ನು ಬಿಟ್ಟು ಹೋಗಲು ನಿರ್ಧರಿಸಿದೆ.ಅಮ್ಮ ಎಷ್ಟು ಬೇಡ ಅಂದರೂ ಕೇಳದೆ ನಿಶ್ಚಿತಾರ್ಥಕ್ಕೆ ೧೦ ದಿನ ಇರುವಾಗ ಅಮೇರಿಕಾಕ್ಕೆ ಬಂದುಬಿಟ್ಟೆ.ಅದೇ ಕೊನೆ ಅವಳನ್ನು ನೋಡಿದ್ದು.೨ ವರ್ಷ ಅಮೇರಿಕಾದಲ್ಲಿ ಕೆಲಸಮಾಡಿದೆ ಅಮ್ಮ ಊರಿಗೆ ಬಾ ಮದುವೆಯಾಗು ಅಂತ ಪ್ರಾಣ ತಿನ್ನುತ್ತ ಇದ್ದಳು ಅದಕ್ಕೋಸ್ಕರ ಊರಿಗೆ ಹೊರಟಿದ್ದು.ನನ್ನ ಆಸೆ ಅಂತೂ ಕೈಗೂಡಲಿಲ್ಲ.ಅಮ್ಮನ ಆಸೆ ಆದರೂ ನೆರವೇರಿಸೋಣ ಅಂತ ಅಂದುಕೊಂಡು ಮಲಗಿದೆ.
   ಎಚ್ಚರಗೊಂಡಾಗ ಮಂಗಳೂರಿನ ವಿಮಾನ ನಿಲ್ದಾಣದಲ್ಲಿದ್ದೆ.ಕರೆದುಕೊಂಡು ಹೋಗಲಿಕ್ಕೆ ತಂದೆ ಬಂದಿದ್ದರು.ಹೇಗಾಯಿತು ಪ್ರಯಾಣ ಅದು ಇದು ವಿಚಾರಿಸಿದರು.ತಂದೆಯ ಹತ್ತಿರ ಅಮೇರಿಕಾದ ವಿಷಯ ಮಾತನಾಡುತ್ತ ಮನೆಗೆ ಬಂದೆ.ಅಮ್ಮ ಮನೆಯ ಎದುರುಗಡೆ ನನಗೋಸ್ಕರ ಕಾಯುತ್ತಿದ್ದಳು.ನನ್ನ ನೋಡಿದಾಗ ಎಷ್ಟು ಖುಷಿಪಟ್ಟಳು ಅಮ್ಮ ನಾನು ಊರಿನಲ್ಲಿದ್ದಾಗ ತುಂಬಾ ದಪ್ಪವಾಗಿದ್ದಳು ನನ್ನ ಬಗ್ಗೆ ಆಲೋಚಿಸಿ ಸಣ್ಣಗಾಗಿ ಹೋಗಿದ್ದಳು.ತನಗೆ ಪ್ರೀತಿ ಸಿಗಲಿಲ್ಲ ಅಂದುಕೊಂಡು ಅಮ್ಮನ ಪ್ರೀತಿ ಮರೆತುಹೋಗಿದ್ದಕ್ಕೆ ಬೇಜಾರಾಯ್ತು.ಇನ್ನು ಮೇಲೆ ಅಮ್ಮನ ಬಿಟ್ಟು ಎಲ್ಲೂ ಹೋಗಬಾರದು ಅಂತ ನಿರ್ಧರಿಸಿದೆ.
   ಅಮ್ಮ ನನಗೋಸ್ಕರ ನನಗೆ ಇಷ್ಟವಾದ ಬಂಗುಡೆಮೀನು ಸಾರ್ ಮಾಡಿದ್ದಳು.೨ ವರ್ಷವಾಗಿತ್ತು ಅಮ್ಮನ ಅಡುಗೆ ತಿನ್ನದೆ.ಊಟ ಮಾಡುತ್ತಾ ನನ್ನ ಎಲ್ಲಾ ಗೆಳೆಯರನ್ನು ಮನೆಯ ಹತ್ತಿರದವರನ್ನು ಕೇಳಿದೆ.ಅದಕ್ಕೆ ಎಲ್ಲಾ ಚೆನ್ನಾಗಿದ್ದಾರೆ ಎಲ್ಲರಿಗೂ ಮದುವೆ ಆಯ್ತು ನೀನು ಮಾತ್ರ ಮಾಡಿಕೊಂಡಿಲ್ಲ.ಈ ಸಲ ಮದುವೆ ಮಾಡಿಕೊಳ್ಳೋ ಮನು ಅಂದಾಗ ಆಯ್ತಮ್ಮ ಇನ್ನೊಂದು ೨ ತಿಂಗಳು ಹೋಗಲಿ ಆಮೇಲೆ ಆಗುತ್ತೀನಿ ಅಂದೆ.ಅವಾಗಲೇ "ಹಾಸಿನಿ"ಯ ನೆನಪಾಗಿದ್ದು..
  ಅಮ್ಮ ಹಾಸಿನಿ ಹೇಗಿದ್ದಾಳೆ? ಅವಳ ಗಂಡನ ಮನೆ ಎಲ್ಲಿ? ಅವಳ ಗಂಡ ಏನು ಕೆಲಸದಲ್ಲಿದ್ದಾರೆ ಅಂತ ಕೇಳಿದಾಗ ನೀನು ಕೇಳುತ್ತಿರುವುದು ನಮ್ಮ ಪಕ್ಕದಮನೆ ಹುಡುಗಿ ಹಾಸಿನಿಯ ವಿಷಯನಾ ಅಂತ ಕೇಳಿದರು.ಹೌದಮ್ಮ ನಾನು ಹೋಗುವಾಗ ಅವಳಿಗೆ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು ಅವಳ ಮದುವೆಗೆ ಇರಲಿಲ್ಲ ಅದಕ್ಕೆ ಕೇಳಿದೆ.ಅಯ್ಯೋ ಪಾಪ ಆ ಹುಡುಗಿ ಅವಳ ಹಣೆಬರಹನೇ ಚೆನ್ನಾಗಿಲ್ಲ ಕಣೋ ಅಂದರು ಅಮ್ಮ ಯಾಕೆ ಏನಾದರೂ ಸಮಸ್ಯೆ ಆಯ್ತಾ ಅವಳಿಗೆ ಎಂದು ಕೇಳಿದೆ ನನ್ನ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.ಮನು ನೀನು ಹೋಗಿ ಒಂದು ವಾರಕ್ಕೆ ಇವಳು ಸ್ಕೂಟಿಯಲ್ಲಿ ಹೋಗುವಾಗ ಲಾರಿಗೆ ಢಿಕ್ಕಿ ಹೊಡೆದಿದ್ದಕ್ಕೆ ತಲೆಗೆ ಸರಿಯಾಗಿ ಪೆಟ್ಟು ತಗಲಿತ್ತು ಆಸ್ಪತ್ರೆಗೆ ಸೇರಿಸಿದಾಗ ಬದುಕುವುದೇ ಕಷ್ಟ ಅಂದಿದ್ದರು ಡಾಕ್ಟರ್. ದೇವರ ದಯೆಯಿಂದ ಬದುಕುವುಳಿದಳು ಆದರೆ ನೆನಪಿನ ಶಕ್ತಿ ಮಾತ್ರ ಕಳೆದುಕೊಂಡಿದ್ದಳು ಯಾರನ್ನು ಗುರುತಿಸುತ್ತಿರಲಿಲ್ಲ ಮೌನವಾಗಿ ಇರುತ್ತಿದ್ದಳು.ಈ ವಿಷಯ ಗೊತ್ತಾದ ಕೂಡಲೆ ವರನ ಕಡೆಯವರು ಈ ಮದುವೆ ಬೇಡ ಅಂತ ಹೇಳಿದರು.
   ಹಾಸಿನಿಯ ತಾಯಿ ಶಾರದಕ್ಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಅವರ ನೋವಿನ ಮೊರೆ ದೇವರಿಗೆ ತಲುಪಿತು ಅಂತ ಕಾಣುತ್ತೆ ಈಗ ೨ ತಿಂಗಳ ಹಿಂದೆ ಹಾಸಿನಿಗೆ ಹಳೆಯ ನೆನಪುಗಳೆಲ್ಲಾ ಬಂದುಬಿಟ್ಟಿದೆ.ಆದರೂ ಮೊದಲಿನ ತರ ಇಲ್ಲ.ಮೌನಿಯಾಗಿರುತ್ತೆ ಕಣೋ.ನನ್ನ ಹತ್ತೀರ ಕೇಳುತ್ತಿದ್ದಳು ಮನು ಯಾವಾಗ ಬರುತ್ತಾನೆ ಅಂತ ನೀನು  ಆ ಕಡೆ ಹೋದರೆ ಆ ಹುಡುಗಿಯನ್ನು ಮಾತನಾಡಿಸಿಕೊಂಡು ಬಾ ಅಂತ ಹೇಳಿ ಅಡುಗೆಮನೆ ಕಡೆ ಹೋದಳು.ಹಾಸಿನಿಗೆ ಮದುವೆಯಾಗಿಲ್ಲ ಅಂದಾಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.ದೇವರು ನನ್ನ ಪ್ರೀತಿಗೆ ಮೋಸಮಾಡಲಿಲ್ಲ ಅಂದುಕೊಂಡು ಅವಳನ್ನು ಮಾತನಾಡಿಸಲ್ಲಿಕ್ಕೆ ಹೊರಟು ಬಂದೆ..
   ಪುಸ್ತಕ ಒದುತ್ತ ಕುಳಿತಿದ್ದಳು ನೋಡಿದಾಗ ಮನಸ್ಸಿಗೆ ಆದ ಆನಂದ ಹೇಳಲ್ಲಿಕ್ಕೆ ಆಗುವುದಿಲ್ಲ ಅಷ್ಟು ಖುಷಿಯಾಗಿತ್ತು. ಹಾಸಿನಿ ನನ್ನನ್ನು ನೋಡಿದಾಗ ಖುಷಿಯಿಂದ ಹಾಯ್ ಮನು ಯಾವಾಗ ಬಂದೆ ನಮ್ಮನೆಲ್ಲಾ ಮರೆತುಬಿಟ್ಟಿದ್ದಿಯಾ ಅಂದುಕೊಂಡಿದ್ದೆ ಅಂದಳು ನಾನು ಅಯ್ಯೋ ಊರು ಮತ್ತೆ ನಿಮ್ಮನೇಲ್ಲಾ ಹೇಗೆ ಮರೆಯಲಿ,ನಾನು ಯಾರನ್ನು ಮರೆತಿಲ್ಲ ಅಂದೆ ಅದಕ್ಕವಳು ತುಂಬಾ ಖುಷಿಪಟ್ಟಿದ್ದು ಅವಳ ಮುಖದಲ್ಲಿ ಕಾಣುತ್ತಿತ್ತು ಮತ್ತೆ ಕೇಳಿದೆ ನಿನ್ನ ಆರೋಗ್ಯ ಹೇಗಿದೆ ಅದಕ್ಕೆ ಅವಳು ನಾನು ಚೆನ್ನಾಗಿದ್ದೀನಿ, ಈವಾಗಂತೂ ಯಾವಾಗಲೂ ಖಾಲಿ ಇರುತ್ತೇನೆ ಪುಸ್ತಕ ಒದುತ್ತ ಇರುತ್ತಿನಿ ಅಂದಾಗ ಹಾಸಿನಿಯ ತಾಯಿ ಶಾರದಕ್ಕ ಬಂದು ವಿಚಾರಿಸಿದರು ನನ್ನ ಮದುವೆಯ ಬಗ್ಗೆ ಕೇಳಿದರು ಇಲ್ಲಾ ಶಾರದಕ್ಕ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ" ಅಂದಾಗ ನಿನ್ನ ಗೆಳೆಯರೆಲ್ಲಾ ಮದುವೆ ಮಾಡಿಕೊಂಡರು ನೀನು ಮದುವೆಯಾಗು ಮನು ಅಂದಳು ಹಾಸಿನಿ.ಆಯ್ತು ನೋಡುತ್ತೀನಿ ನಾಳೆ ಮತ್ತೆ ಬರುತ್ತೀನಿ ಅಂತ ಹೇಳಿ ಮನೆಗೆ ಬಂದುಬಿಟ್ಟೆ ಬರುವಾಗ ಒಂದು ನಿರ್ಧಾರ ಮಾಡಿಕೊಂಡೆ ಬಂದಿದ್ದೆ.
  ರಾತ್ರಿ ಮಲಗುವಾಗ ಅಮ್ಮನ ಹತ್ತಿರ ನಾನು ಒಂದು ಹುಡುಗಿ ನೋಡಿದ್ದೇನೆ ಅವಳನ್ನು ಮದುವೆಯಾಗುತ್ತೇನೆ ನೀನು ಅವಳನ್ನು ಅವರ ಮನೆಯವರನ್ನು ಒಪ್ಪಿಸಬೇಕು ಅಂದೆ ಅದಕ್ಕೆ ಅಮ್ಮ ಖುಷಿಯಿಂದ ಆಯ್ತು ಮಾರಾಯ ನೀನು ಮದುವೆಗೆ ಒಪ್ಪಿಕೊಂಡಿದ್ದೆ ಪುಣ್ಯ ಯಾರು ಹುಡುಗಿ ಅಂದಾಗ "ಹಾಸಿನಿ" ಅಂದೆ ಅಮ್ಮ ನನ್ನನ್ನು ಆಶ್ಚರ್ಯದಿಂದ ನೋಡಿ ತಮಾಷೆ ಮಾಡುತ್ತಿದ್ದಿಯಾ ನಿಜ ಹೇಳುತ್ತಿದ್ದಿಯಾ ಮನು, ಇಲ್ಲಮ್ಮಾ ನಾನು ಅವಳನ್ನು ಮದುವೆಯಾಗುವುದು ನಿನಗೆ ಇಷ್ಟವಿಲ್ವಾ ಇಲ್ಲ ಅಂದರೆ ಹೇಳು ಬೇರೆ ಹುಡುಗಿಯನ್ನು ನೋಡು.ಇಲ್ಲಪ್ಪಾ ಅಂಥ ಒಳ್ಳೆಯ ಹುಡುಗಿ ಸೊಸೆ ಆಗಿಬರುವುದು ನನ್ನ ಪುಣ್ಯ ಕಣೋ, ನಿನ್ನ ಇಷ್ಟನೇ ನನ್ನ ಇಷ್ಟ ಮನು ನಾನು ಇಷ್ಟು ದಿನ ಅದರ ಬಗ್ಗೆ ಆಲೋಚನೆ ಮಾಡಿಲ್ಲ ಅದಕ್ಕೆ ಹೇಳಿದೆ.ನಾಳೆ ಅಪ್ಪಯ್ಯನ ಹತ್ತಿರ ಹಾಸಿನಿಯ ತಂದೆಯ ಹತ್ತಿರ ಮಾತನಾಡಲ್ಲಿಕ್ಕೆ ಹೇಳುತ್ತೀನಿ ಈವಾಗ ನಿದ್ರೆ ಮಾಡು ಅಂತ ಹೇಳಿ ಹೋದಳು.ಅಮ್ಮ ಹಾಸಿನಿಯನ್ನು ಒಪ್ಪಿಕೊಂಡಿದ್ದಕ್ಕೆ ಮದುವೆಯಾದಷ್ಟೇ ಖುಷಿಯಾಗಿತ್ತು ನನಗೆ.ಆದರೆ ಹಾಸಿನಿ ನನ್ನ ಮದುವೆಯಾಗಲ್ಲಿಕ್ಕೆ ಒಪ್ಪುತ್ತಾಳೊ ಇಲ್ಲವೋ ಅನ್ನುವ ಭಯಕಾಡುತ್ತಿತ್ತು.
 ಹಾಸಿನಿಯ ತಂದೆ-ತಾಯಿ ನಮ್ಮ ತಂದೆ-ತಾಯಿ ಹಾಸಿನಿಯ ಹತ್ತಿರ ಮದುವೆಯ ವಿಷಯ ಮಾತನಾಡಿದ್ದರು.ಅವಳು ನಿಮ್ಮ ಇಷ್ಟನೇ ನನ್ನ ಇಷ್ಟ ಅಂತ ಒಪ್ಪಿಗೆ ಕೊಟ್ಟಳು. ಅಂತೂ ನನ್ನ ೩ ವರ್ಷದ ಕನಸು ಹಾಸಿನಿಯ ಜೊತೆ ಮದುವೆಯೊಂದಿಗೆ ನನಸಾಗಿತ್ತು.ಪ್ರಥಮ ರಾತ್ರಿಯಲ್ಲಿ ಹಾಸಿನಿ ನನ್ನ ಹತ್ತಿರ ಬಂದು "ರೀ ನಿಮಗೆ ಒಂದು ವಿಷಯ ಹೇಳುತ್ತೀನಿ ಅಂದಳು ಏನು ವಿಷಯ ಹೇಳು ಅಂದೆ ಅದಕ್ಕೆ ನಾನು ನಿಮ್ಮನ್ನು ೩ ವರ್ಷಗಳಿಂದ ಇಷ್ಟಪಟ್ಟಿದ್ದೆ ಅಂದಾಗ ನನಗೆ ಆಶ್ಚರ್ಯವಾಗಿತ್ತು ಮತ್ತೆ ಯಾಕೆ ನನಗೆ ಮೊದಲೆ ಹೇಳಲಿಲ್ಲ ಹಾಸಿನಿ ಅಂದೆ ಅದಕ್ಕೆ ಅವಳು ನಾನು ಹುಡುಗಿ ನಿಮ್ಮನ್ನು ಪ್ರೀತಿಸುತ್ತೇನೆ ಅಂತ ಹೇಗೆ ಹೇಳುವುದು ಅದು ಅಲ್ಲದೆ ಮನೆ ಹತ್ತಿರದ ಹುಡುಗ ನೀವು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತೀರಾ ಅಂತ ಭಯದಿಂದ ಹೇಳಲಿಲ್ಲ.ದೇವರು ದೊಡ್ಡವನು ನಾನು ಇಷ್ಟಪಟ್ಟ ಹುಡುಗನೇ ನನಗೆ ಗಂಡನಾಗಿ ಕೊಟ್ಟಿದ್ದಾನೆ ಅಂದಳು.ನನಗೂ ಸಹ ನಾನು ಪ್ರೀತಿಸಿದ ಹುಡುಗಿನೇ ಹೆಂಡತಿಯಾಗಿ ದೊರಕಿದಳು.ಅದಕ್ಕೆ ಇರಬೇಕು ಹಿರಿಯವರು ಹೇಳಿದ್ದು "ಮದುವೆ"ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತ ನನ್ನ ಪಾಲಿಗೆ ಅದು ನಿಜವಾಯಿತು..


ಎನ್.ರಾಜೇಶ್.ಕುಮಾರ್.ನೇರಳಕಟ್ಟೆ

Tuesday, 1 January 2013

"ಟೈಮ್"

                                    
 ಹಾಯ್ ಸ್ವೀಟಿ ಐ ಲವ್ ಯೂ" ಅಂತ ಮೊಬೈಲ್ ಸದ್ದು ಮಾಡಿತು ಯಾರು ಮೇಸೆಜ್ ಮಾಡಿದ್ದು ಅಂತ ಮೊಬೈಲ್ ನೋಡಿದೆ ನಾನು ಯಾವುದೋ ಹೊಸ ನಂಬರನಿಂದ "ಕಾಲ್ ಮಿ" ಅಂತ ಬಂದಿತ್ತು.ನನಗೆ ಯಾರು ಮೆಸೇಜ್ ಮಾಡಿದ್ದು ಅಂತ ತಿಳಿದುಕೊಳ್ಳಲ್ಲಿಕ್ಕೆ ಆ ನಂಬರಿಗೆ ಫೋನ್ ಮಾಡಿದೆ " ಹಲೋ ಅಂತು ಆ ಕಡೆಯಿಂದ ಕೋಗಿಲೆಯ ಕಂಠದಂತೆ ಇರುವ ಹುಡುಗಿಯ ಧ್ವನಿ.ನಾನು ಯಾರು ನೀವು ಯಾಕೆ ಮೇಸೆಜ್ ಮಾಡಿದ್ದು ಅಂತ ಕೇಳಿದೆ ಅದಕ್ಕೆ ಅವಳು ಐ ಯಾಮ್ ಸಾರಿ ನನ್ನ ಅಣ್ಣನಿಗೆ ಮಾಡಲ್ಲಿಕ್ಕೆ ಹೋಗಿ ನಿಮಗೆ ಮಾಡಿದೆ ತಪ್ಪಾಯ್ತು ಅಂದಳು.ಹೌದಾ ಆಯ್ತು ಬಿಡಿ ಅಂತ ಕಟ್ಟಮಾಡಿದೆ.ಆದರೆ ಅವಳ ಸ್ವರ ಮಾತ್ರ ಕಿವಿಯಲ್ಲಿ ಗುಯ್ ಗುಡುತ್ತಿತ್ತು.ಎಷ್ಟು ಮಧುರವಾಗಿದೆ ಅವಳ ಧ್ವನಿ ಇನ್ನು ಅವಳ ಸೌಂದರ್ಯ ಹೇಗಿರಬಹುದು ಅಂತ ಆಲೋಚಿಸುತ್ತಿರವಾಗಲೇ ಮೊಬೈಲ್ ಮತ್ತೆ ಸದ್ದು ಮಾಡಿತು ನೋಡಿದಾಗ ಅದೇ ನಂಬರಿನಿಂದ "ಥ್ಯಾಂಕ್ಸ್"ಅಂತ ಬರೆದಿತ್ತು.ನನಗೆ ತುಂಬಾ ಖುಷಿಯಾಯಿತು ಅವಳು ಪುನಃ ಮೇಸೆಜ್ ಮಾಡಿದ್ದಕ್ಕೆ.ನಾನು ಪುನಃ ಮೇಸೆಜ್ ಮಾಡಿ ಇಟ್ಸ್ ಒ.ಕೆ.ಅಂದೆ. ಅದಾದ ನಂತರ ದಿನ ಒಂದೊಂದು ಮೇಸೆಜ್ ಮಾಡುತ್ತಿದ್ದಳು ನಾನು ಅದಕ್ಕೆ ಉತ್ತರಿಸುತ್ತಿದ್ದೆ ಆಮೇಲೆ ಒಂದು ದಿನ ನನ್ನ ಫ್ರೆಂಡ್ ಮಾಡಿಕೊಳ್ಳುತ್ತೀರಾ ಅಂತ ಕೇಳಿದೆ.ಅವಳು ಆಯ್ತು ನಿಮ್ಮ ಹೆಸರೇನು ಅಂತ ಕೇಳಿದಳು ನಾನು ವಿನಯ್ ಅಂದೆ ಹಾಗೆ ಅವಳ ಹೆಸರು ಕೇಳಿದ್ದಕ್ಕೆ ಸ್ಮಿತಾ ಅಂದಳು.ಮುಖ ನೋಡದೆ ಗೆಳೆತನ ಶುರುಮಾಡಿದೆ.
  ನನ್ನ ಹೆಸರು ವಿನಯ್ ಅಂತ ಎಲ್ಲರೂ ವಿನು ಅಂತಾರೆ.ಕಷ್ಟಪಟ್ಟು ಓದಿದ್ದಕ್ಕೆ ಖಾಸಗಿ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು.ಅದು ಬೆಂಗಳೂರು ಎಂಬ ಮಾಯಾನಗರಿಯಲ್ಲಿ.ಮನೆಯಲ್ಲಿ ಅಷ್ಟು ದೂರ ಹೋಗುವುದು ಬೇಡ ಅಂದರೂ ಕೇಳದೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದ್ದೆ ರೂಮ್ ಮಾಡಿಕೊಂಡು ಒಂಟಿಯಾಗಿದ್ದೆ.ಕಂಪೆನಿಯ ಕೆಲಸಗಾರರು ಬಿಟ್ಟರೆ ಬೇರೆ ಯಾರು ಗೆಳೆತನವಿಲ್ಲದ ನನಗೆ ಹುಡುಗಿಯೊಬ್ಬಳು ಫೋನ್ ಗೆಳತಿ ಆಗಿ ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು.ಯಾವಾಗಲೂ ಅವಳಿಗೆ ಮೇಸೆಜ್ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದೆ.
 ಗೆಳೆತನ ಶುರುವಾಗಿ ಅದಾಗಲೇ ಒಂದುವಾರ ಕಳೆದಿತ್ತು. ನನಗೆ ಅವಳನ್ನು ನೋಡಬೇಕು ಅನ್ನಿಸುತ್ತಿತ್ತು.ಕೇಳಲ್ಲಿಕ್ಕೆ ಧೈರ್ಯವಿಲ್ಲದೆ ಸುಮ್ಮನಾಗಿದ್ದೆ..ಒಂದುದಿನ ಧೈರ್ಯ ಮಾಡಿ ನಿಮ್ಮನ್ನು ನೋಡಬೇಕು ಸ್ಮಿತಾರವರೆ ಅಂದಾಗ ಯಾಕೆ ಅಂತ ಕೇಳಿದಳು ನಾನು ಸುಮ್ಮನೆ ಕೂತೂಹಲಕ್ಕೆ ಅಂದೆ.ಆಯ್ತು ನಿಮಗೆ ಯಾವಾಗ ರಜೆ ಇರುತ್ತೆ ಅಂತ ಕೇಳಿದಳು ಸಂಡೆ ಅಂದಿದ್ದಕ್ಕೆ ನನಗೂ ಅವತ್ತು ರಜೆ ಎಲ್ಲಿ ಸಿಗುತ್ತೀರಾ ಅಂತ ಕೇಳಿದಳು.ನಾನು ನೀವೆ ಹೇಳಿ ಅಂದೆ.ಅದಕ್ಕೆ ಅವಳು ಸಂಡೆ ಬೆಳ್ಳಿಗ್ಗೆ ೯ ಗಂಟೆಗೆ ಕಬ್ಬನ್ ಪಾರ್ಕ್ ಹತ್ತಿರ ಒಬ್ಬರೆ ಬನ್ನಿ ಅಂದಳು.ನಾನು ನಿಮ್ಮನ್ನು ಗುರುತು ಹಿಡಿಯುವುದು ಹೇಗೆ ಅಂದಿದ್ದಕ್ಕೆ ನೀವು ಬ್ಯಾಕ್ ಪ್ಯಾಂಟ್ ಬ್ಲೂ ಟಿ_ಶರ್ಟ್ ಹಾಕಿಕೊಂಡು ಬನ್ನಿ ನಾನು ಗುರುತು ಹಿಡಿಯುತ್ತೇನೆ ಅಂದಳು.ನಾನು ಬರುತ್ತೀನಿ ಮಿಸ್ ಮಾಡಬಾರದು ಅಂದಿದ್ದಕ್ಕೆ ನಾನು ಬರುತ್ತೇನೆ ನೀವು ಮಿಸ್ ಮಾಡದಿದ್ದರೆ ಸಾಕು ಅಂದಳು.
 ಭಾನುವಾರ ಯಾವಾಗ ಬರುತ್ತೇ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ.ಬೆಳಿಗ್ಗೆ ಆದರೆ, ಅವಳನ್ನು ಮೀಟ್ ಮಾಡುತ್ತೀನಿ ಅನ್ನುವ ಖುಷಿ ನನಗೆ. ರಾತ್ರಿ ಮನೆಯಿಂದ ಅಮ್ಮ ಫೋನ್ ಮಾಡಿದ್ದಳು.ಕೆಲಸದ ಬಗ್ಗೆ, ನನ್ನ ಬಗ್ಗೆ ವಿಚಾರಿಸಿದಳು ನಾನು ಅಪ್ಪಿತಪ್ಪಿಯೂ ಆ ಹುಡುಗಿಯ ವಿಷಯ ಹೇಳಲಿಲ್ಲ.ಅಪ್ಪನು ಮಾತನಾಡಿದರು.ಅಮ್ಮ ತುಂಬಾ ಅದು ಇದು ಅಂತ ಮಾತನಾಡಿ ಹುಷಾರ್ ಆಗಿರು ಫೋನ್ ಇಟ್ಟರು.ನನಗೆ ಬೆಳಿಗ್ಗೆ ಆದರೆ ಸಾಕಿತ್ತು.
   ಬೆಳ್ಳಗ್ಗೆ ಎದ್ದು ಗಂಟೆ ಎಷ್ಟಾಯ್ತು ಅಂತ ಮೊಬೈಲ್ ನೋಡಿದಾಗ ರಾತ್ರಿ ಜಾಸ್ತಿ ಮಾತನಾಡಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಆಗಿತ್ತು.ಮೇಜಿನ ಮೇಲೆ ಅಪ್ಪ ಪ್ರೀತಿಯಿಂದ ಕೊಟ್ಟಿದ್ದ ವಾಚಿತ್ತು.ಟೈಮ್ ನೋಡಿದಾಗ ೭ ಗಂಟೆ ತೋರಿಸುತ್ತಿತ್ತು.ಮೊಬೈಲ್ ಚಾರ್ಜಗೆ ಹಾಕಿಬಿಟ್ಟು ಇನ್ನು ಸಮಯವಿದೆ ಅಂತ ಅಂದುಕೊಂಡು ಅಲ್ಲೆ ಮಲಗಿದೆ ಜೋರು ನಿದ್ರೆ ಬಂದಿತ್ತು ಫಟ್ ಅಂತ ಎಚ್ಚರಿಕೆ ಆಯ್ತು.ಟೈಮ್ ನೋಡಿದರೆ 7 ಗಂಟೆನೇ ತೋರಿಸುತ್ತಿತ್ತು.ತುಂಬಾ ದಿನಗಳಿಂದ ಕೀಲಿ(ಕೀ) ಕೊಡದೆ ಇರುವುದರಿಂದ ವಾಚ್ ನಿಂತಿತ್ತು ಅಂತ ಅವಾಗ ಗೊತ್ತಾಯಿತು.ಮೊಬೈಲ್ ಆನ್ ಮಾಡಿ ಗಂಟೆ ನೋಡಿದಾಗ 11 ಗಂಟೆ ಆಗಿತ್ತು. ಅವಳಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಅಂತ ಹೇಳಿತು ಸಿಟ್ಟು ಮಾಡಿಕೊಂಡಿರಬೇಕು ಅಂತ ಅಂದುಕೊಂಡೆ.ಅಪ್ಪ ಕೊಟ್ಟಿದ್ದ ವಾಚಿನ ಮೇಲೆ ಇನ್ನಿಲದಷ್ಟು ಸಿಟ್ಟು ಬಂದಿತ್ತು.ಎಲ್ಲಾ ಈ ವಾಚಿನಿಂದ ಆಗಿದ್ದು ಒಳ್ಳೆಯ ಗೆಳತಿಯನ್ನು ಕಳೆದುಕೊಂಡೆ ಅಂತ ಸಿಟ್ಟಿನಿಂದ ರೂಮಿನ ಮೂಲೆಗೆ ಬಿಸಾಡಿದೆ.ಅಪ್ಪ ಬೆಂಗಳೂರಿಗೆ ಬರುವಾಗ ಪ್ರೀತಿಯಿಂದ ಕೊಟ್ಟಿದ್ದ ವಾಚ್ ಅದು.ಹಳೆಯ ಕಾಲದ ಕೀಲಿಕೊಡುವ ವಾಚ್ ಆದ್ದರಿಂದ ನಾನು ಕಟ್ಟಿಕೊಳ್ಳುತ್ತಿರಲಿಲ್ಲ.ಈ ತರ ತೊಂದರೆ ನೀಡುತ್ತೆ ಅಂದುಕೊಂಡಿರಲಿಲ್ಲ ನಾನು.
 ಅದಾದ ನಂತರ ಆ ನಂಬರಿಗೆ ಅದೆಷ್ಟೇ ಸಲ ಫೋನ್ ಮಾಡಿದರು ಸ್ವಿಚ್ ಆಫ್ ಅಂತಾನೆ ಹೇಳುತ್ತಿತ್ತು.ಅವಳಿಗೆ ಬೇಜಾರಾಗಿ ನಂಬರ್ ಬದಲಾಯಿಸಿರಬೇಕು ಅಂದುಕೊಂಡು ಸುಮ್ಮನಾದೆ.ಆ ವಿಷಯ ಮರೆತುಬಿಟ್ಟಿದ್ದೆ.ರಜೆದಿನ ರೂಮಿನಲ್ಲಿ ಕುಳಿತುಕೊಂಡು ಟಿವಿ 9 ನೊಡುತ್ತಿದ್ದೆ.ಅದರಲ್ಲಿ ಒಂದು ಪ್ರೋಗ್ರಾಮ್ ಬರುತ್ತಿತ್ತು."ಹುಡುಗಿಯರ ಧ್ವನಿಗೆ ಮೋಸಹೋದ ಹುಡುಗರು"ಅಂತ. ಆರ್ಕುಟ್,ಫೇಸಬುಕ್ ನಲ್ಲಿರುವ ಹುಡುಗರ ಮೊಬೈಲ್ ನಂಬರ್ ತೆಗೆದುಕೊಂಡು ಹುಡುಗಿಯರ ಧ್ವನಿಯಲ್ಲಿ ಮಾತನಾಡಿ ಗೆಳೆತನ ಮಾಡಿಕೊಂಡು ಹುಡುಗರನ್ನು ಕರೆಸಿಕೊಂಡು ಅವರಲ್ಲಿರುವ ಮೊಬೈಲ್ ಹಣ,ಚಿನ್ನವನ್ನು ದೋಚುತ್ತಾರೆ ಅನ್ನುವ ಸುದ್ದಿ ಬರುತ್ತಿತ್ತು.ಮೋಸ ಹೋದ ಹುಡುಗರು ಮಾತನಾಡುತ್ತಿದ್ದರು ನನಗೆ ಭಯವಾಯಿತು ನನಗೆ ಫೋನ ಮಾಡಿ ಮಾತನಾಡಿದವಳು ಈ ಗುಂಪಿಗೆ ಸೇರಿದವಳಲ್ಲ ಅನ್ನುತ್ತಿರುವಾಗಲೇ ಮೊಬೈಲ್ ನಂಬರ್ ಕೊಡುತ್ತಿದ್ದರು ಅದರಲ್ಲಿ ನನಗೆ ಫೋನ್ ಬರುತ್ತಿದ್ದ ನಂಬರ್ ಸಹ ಇತ್ತು. ಹೃದಯ ಒಂದು ಸಲ ನಿಂತ ಹಾಗೆ ಆಯಿತು.ಎಷ್ಟು ಮೋಸ ಹೋದೆ ನಾನು ಹುಡುಗಿಯ ಸ್ವರ ಕೇಳಿ ಮೋಸ ಹೋಗಿದ್ದ ನನಗೆ ನನ್ನ ಬಗ್ಗೆ ಅಸಹ್ಯವಾಯಿತು.ಅವತ್ತು ವಾಚ್ ಸರಿಯಾಗಿ ಗಂಟೆ ತೋರಿಸಿದ್ದು ನಾನೇನಾದರೂ ಹೋಗಿದ್ದರೆ ಮೊಬೈಲ್ ಹಣ ಎಲ್ಲ ಕಳೆದುಕೊಳ್ಳುತ್ತಿದ್ದೆ ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು.ನನ್ನನ್ನು ಆ ಗಂಡಾಂತರದಿಂದ ಪಾರು ಮಾಡಿದ್ದು ಅಪ್ಪ ಕೊಟ್ಟ ವಾಚ್.ಅದಕೆಷ್ಟು ಧನ್ಯವಾದ ಹೇಳಿದರು ಸಾಲದು ಎಲ್ಲಿದೆ ಅಂತ ಹುಡುಕಿದಾಗ ರೂಮಿನ ಮೂಲೆಯಲ್ಲಿ ಬಿದ್ದಿತ್ತು.ಎತ್ತಿ ನೋಡಿದಾಗ ಗ್ಲಾಸ್ ಒಡೆದುಹೊಗಿತ್ತು.ನನ್ನ ಮಾನ ಹಣ ಕಾಪಾಡಿದ ವಾಚ್ ಗೆ  ಗ್ಲಾಸ್ ಹಾಕಿ ಕೈಗೆ ಕಟ್ಟಿಕೊಳ್ಳಲ್ಲಿಕ್ಕೆ ಶುರುಮಾಡಿದೆ..

        
                                                                -ಎನ್.ರಾಜೇಶ್.ಕುಮಾರ್.ನೇರಳಕಟ್ಟೆ.