Monday, 14 January 2013

"ಶ್ರೇಷ್ಠ ಜೀವಿ"



ಶ್ರೀಮಂತರ ಮನೆಯ ನಾಯಿಗೆ
ಸಿಗುವ ಗೌರವ ಆ ಮನೆ ಕಾಯುವ
ಕೆಲಸಗಾರನಿಗೆ ಇಲ್ಲ
ಆದರೂ ಮನುಷ್ಯ ಶ್ರೇಷ್ಠ ಜೀವಿ....?

ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ
ಮಕ್ಕಳ ಆಸೆಗಳನ್ನು ಪೂರೈಸಿ
ಅವರ ಸಂತೋಷದಲ್ಲಿ ತಮ್ಮ ಸಂತೋಷ ಕಾಣುವ
ಮುದಿ ತಂದೆ-ತಾಯಿಯರನ್ನು ನೋಡಿಕೊಳ್ಳದೇ
ಕೊನೆಯ ಕಾಲದಲ್ಲಿ ನೆಮ್ಮದಿ ನೀಡದೇ ವೃದ್ಧಾಶ್ರಮಕ್ಕೆ
ಕಳುಹಿಸುವ ನಾವು ಶ್ರೇಷ್ಠ ಜೀವಿಗಳು....?

ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆದು
ಆ ಹಣದಲ್ಲಿ ಬದುಕುವ,
ಮನಸ್ಸಿನಲ್ಲಿ ಬರಿ ಕೆಟ್ಟದು ತುಂಬಿಕೊಂಡು
ಎದುರಿಗೆ ನಗು ನಗುತ್ತ ಮಾತಾಡಿ ಮೋಸ ಮಾಡುವ
ಮನುಷ್ಯರು ಶ್ರೇಷ್ಠ ಜೀವಿಗಳು...?

ಸಂಬಂಧಗಳಿಗೆ ಬೆಲೆಕೊಡದೇ
ಹಣಕ್ಕೆ ಬೆಲೆಕಟ್ಟುವ,
ಹಣಕ್ಕಾಗಿ ಸ್ವಂತ ಅಪ್ಪ-ಅಮ್ಮ ಅಣ್ಣ-ತಮ್ಮಂದಿರನ್ನು
ಕೊಲೆ ಮಾಡುವ ನಾವು ಶ್ರೇಷ್ಠ ಜೀವಿಗಳು...?

ದೇವರ ಹೆಸರಿನಲ್ಲಿ ಮೂಢನಂಬಿಕೆಯನ್ನು ಬೆಳೆಸಿ
ಪ್ರಾಣಿಬಲಿ-ನರಬಲಿ ಕೊಡುವ,
ಕಳ್ಳ ಕಪಟ ಸನ್ಯಾಸಿಗಳನ್ನು ದೇವರು ಅಂತ
ನಂಬಿ ತಮ್ಮದೆಲ್ಲಾ ಕೊಟ್ಟು ಮೋಸ ಹೋಗುವ
ನಾವು ಶ್ರೇಷ್ಠ ಜೀವಿಗಳು....?

ಹಸಿವೆಯಿಂದ ಬಳಲುತ್ತಿದ್ದರೂ
ಪ್ರಾಣಿ-ಪಕ್ಷಿಗಳು ಮಾಡಿಕೊಳ್ಳುವುದಿಲ್ಲ
ಆತ್ಮಹತ್ಯೆ..
ಕೋಟಿಕೋಟಿ ಹಣ ಇದ್ದರೂ
ಒಂದು ಸಮಸ್ಯೆ ಬಂದರೆ ಅದನ್ನು
ಎದುರಿಸಲಾಗದೆ ಮನುಷ್ಯ ಮಾಡಿಕೊಳ್ಳುತ್ತಾನೆ
ಆತ್ಮಹತ್ಯೆ ಇಲ್ಲದಿದ್ದರೆ ಮಾಡುತ್ತಾರೆ
ಇನ್ನೊಬ್ಬರ ಹತ್ಯೆ..
ಆದರೂ ಮನುಷ್ಯ ಶ್ರೇಷ್ಠ ಜೀವಿ...?

      ಎನ್.ಆರ್.ಕೆ.ನೇರಳಕಟ್ಟೆ...

No comments:

Post a Comment