Saturday, 9 May 2020
"ಜಾತಿ"
ಮಹೇಶನಿಗೆ ಈ ಜಾತಿಯ ಹುಚ್ಚು ಬಹಳ
ಅದೇನೋ ತಾನು ಆ ಜಾತಿಯಲ್ಲಿ ಹುಟ್ಟಿದ್ದೇ ನನ್ನ ಪೂರ್ವಜನ್ಮದ ಪುಣ್ಯದ ಫಲವೆಂಬಂತೆ ವರ್ತಿಸುತ್ತಿರುತ್ತಾನೆ.ತನ್ನ ಜಾತಿ ಬಿಟ್ಟು ಬೇರೆ ಜಾತಿಯವರೆಲ್ಲಾ ನಿಕೃಷ್ಟರು ಏನೋ ಪಾಪ ಮಾಡಿ ಆ ಜಾತಿಯಲ್ಲಿ ಜನಿಸಿದ್ದಾರೆ ಅಂತ ತಿಳಿದುಕೊಂಡಿದ್ದ.
ಮನೆಯಲ್ಲಿ ಅಪ್ಪ ಅಮ್ಮ ಈ ಜಾತಿಯ ಬಗ್ಗೆ ಮಾತನಾಡಬೇಡ ಜಾತಿಯ ಭೇದಭಾವ ಒಳ್ಳೆಯದಲ್ಲ ಪ್ರಪಂಚದಲ್ಲಿ ಎರಡೇ ಜಾತಿ ಅದು ಗಂಡು ಮತ್ತು ಹೆಣ್ಣು ಅಂತ ಹೇಳಿದ್ದರು ಅವನು ಅದನ್ನು ತೆಗೆದುಕೊಂಡರಲಿಲ್ಲ.ಯಾರು ಹೇಳಿದರು ಕೇಳದೆ ತನ್ನದೇ ಸರಿ ಅಂತ ಅಂದುಕೊಂಡಿದ್ದ.
ನಮ್ಮ ಜಾತಿ ಹಂಗೆ
ನಮ್ಮ ಜಾತಿ ಹಿಂಗೆ
ನಮ್ಮದು ಶ್ರೇಷ್ಠ ಜಾತಿ
ನಿಮ್ಮದು ಕನಿಷ್ಠ ಜಾತಿ ಎಂದೆಲ್ಲಾ ಉದ್ದುದ್ದವಾಗಿ ಹೇಳಿಕೊಂಡು ತಿರುಗಾಡುತ್ತಿರುತ್ತಿದ್ದ..
ಮನೆಯ ಮಹಡಿಯ ರೂಮಿನ ಕ್ಲಿನ್ ಮಾಡುವಾಗ ಅಜ್ಜನ ಡೈರಿ ಸಿಕ್ಕಿತು ಮಹೇಶನಿಗೆ.ತೆರೆದು ನೋಡಿದಾಗ ನನ್ನದೇ ಚಿಕ್ಕ ಮಗುವಿರುವಾಗ ತೆಗೆದ ಫೋಟೋ ಅದರ ಕೆಳಗೆ "ನನ್ನ ಮಗನಿಗೆ ಮಕ್ಕಳಾಗಲೇ ಇಲ್ಲ
ಕೊನೆಗೆ ಸಂಬಂಧಿಕರು ಮತ್ತು ತಮ್ಮದೇ ಜಾತಿಯ ಊರಿನವರ ವಿರೋಧ ಕಟ್ಟಿಕೊಂಡು ಅನಾಥಾಶ್ರಮದಲ್ಲಿ ಜಾತಿ ತಿಳಿಯದ ಮಗುವನ್ನು ದತ್ತು ತೆಗೆದುಕೊಂಡು ಬಂದಿದ್ದ ನನ್ನ ಮಗ.ಜಾತಿ ಇಲ್ಲದ ಈ ಮಗು ಜಾತಿ ಧರ್ಮವನ್ನು ಮೀರಿ ನಮ್ಮ ಮನೆಯ ಬೆಳಕಾಗಲಿ ಅಂತ ಬರೆದಿದ್ದರು..
ಅದನ್ನು ಓದಿದ ಮಹೇಶನಿಗೆ ತುಂಬಾ ನೋವಾಗಿತ್ತು.ಅವನ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ನೀರಿತ್ತು.!!!!
ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವೊಡೆ ಕಿಚ್ಚು ಎರಡಿಲ್ಲ -ಜಗವೆಲ್ಲ
ಜಡೆಗೊಂಬುತಿದೆಕೋ ಸರ್ವಜ್ಞ !!
ಎಲ್ಲರೂ ವಾಸಿಸುವುದು ಒಂದೇ ಭೂಮಿಯ ಮೇಲೆ. ಎಲ್ಲರೂ ಕುಡಿಯುವ ನೀರು ಒಂದೇ. ಸುಡುವ ಬೆಂಕಿಯು ಎರಡಿಲ್ಲ . ಹಾಗಾದ ಮೇಲೆ ಆ ಜಾತಿ ಈ ಜಾತಿ ಎಂಬ ಭೇಧವೇಕೆ?
ಎನ್.ಆರ್.ಕೆ. ನೇರಳಕಟ್ಟೆ.
Subscribe to:
Comments (Atom)