ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿರುವ ಭಾರತಕ್ಕೆ ಹೋಗುವ ವಿಮಾನವೇರಿದೆ.೨ ವರ್ಷದ ನಂತರ ಅಮೇರಿಕಾಕ್ಕೆ ಗುಡ್ ಬೈ ಹೇಳಿ ತಾಯಿನಾಡಾದ ಭಾರತಕ್ಕೆ ಹೊಗುತ್ತಿದ್ದೇನೆ..ನಾಳೆ ಅಂದರೆ ಹಳೆಯ ಗೆಳೆಯರನ್ನು, ಮನೆಯವರನ್ನು ಕಾಣಬಹುದು ಅನ್ನುವ ಖುಷಿ ಒಂದೆಡೆ ಆದರೆ ಊರಿಗೆ ಬಂದ ಕೂಡಲೇ ಮದುವೆ ಆಗು ಅಂತ ಹೇಳುತ್ತಿರುವ ಅಮ್ಮನಿಂದ ನಾನು ಮದುವೆಯಾಗುವುದಿಲ್ಲ ಅಂತ ಹೇಳುವುದು ಹೇಗೆ ಅನ್ನುವ ಭಯ ಇನ್ನೊಂದು ಕಡೆ..
ಅಪ್ಪ ಅಮ್ಮನ ಬಿಟ್ಟು ಇಷ್ಟು ದೂರ ೨ ವರ್ಷ ಯಾಕಾಗಿ ಇದ್ದೆ ಎಂದು ಆಲೋಚನೆ ಮಾಡಿದಾಗ ಕಣ್ಣುಮುಂದೆ ಬಂದಿದ್ದೆ ತನ್ನ ಪ್ರೀತಿ ಮತ್ತು ಪ್ರೀತಿಸಿದವಳು..ಅಮ್ಮ ಮದುವೆಯಾಗು ಅಂದಾಗೆಲ್ಲಾ ಕಣ್ಣುಮುಂದೆ ಬರುತ್ತಿದ್ದ ಹುಡುಗಿ" ಹಾಸಿನಿ".ತಾನು ಮನಸಾರೆ ಇಷ್ಟಪಟ್ಟು ಪ್ರೀತಿಸಿದ ಹುಡುಗಿ.ನನ್ನದು ಒಂದು ಸೈಡ್ ಲವ್ ಆಗಿತ್ತು.ನಾನು ಅವಳನ್ನು ೩ ವರ್ಷದಿಂದ ಪ್ರೀತಿಸುತ್ತಿದ್ದೇನೆ ಆದರೆ ಅವಳಿಗೆ ನಾನು ಪ್ರೀತಿಸುತ್ತಿರುವ ವಿಷಯ ಹೇಳಿರಲಿಲ್ಲ.ಯಾಕೆಂದರೆ ಮನೆಯ ಹತ್ತಿರದ ಹುಡುಗಿ.ಅವಳ ತಂದೆ ನಮ್ಮ ತಂದೆ ಪ್ರಾಣ ಸ್ನೇಹಿತರು.ನನ್ನ ಈ ಪ್ರೀತಿಯ ವಿಷಯದಿಂದ ಅವರುಗಳು ಬೇರೆಯಾಗುವುದು ನನಗೆ ಇಷ್ಟವಿರಲಿಲ್ಲ ಅದು ಅಲ್ಲದೆ ಅವಳಿಗೆ ನನ್ನ ಪ್ರೀತಿಯ ವಿಷಯ ಹೇಳಿದಾಗ "ನೀನಂದ್ರೆ ನನಗಿಷ್ಟವಿಲ್ಲ ಅಂದರೆ ಅವಳ ಎದುರು ಅಸಹಾಯಕನಾಗಿ ನಿಲ್ಲುವ ಪರಿಸ್ಥಿತಿ ನೆನೆದು ಭಯಬಿದ್ದು ಅವಳಿಗೂ ಹೇಳಿರಲಿಲ್ಲ.ಹೇಳದೆ ಇದ್ದಿದ್ದಕ್ಕೆ ನನಗೆ ತಕ್ಕಶಾಸ್ತಿ ಆಯ್ತು ಅವಳಿಗೆ ಮನೆಯಲ್ಲಿ ಬೇರೆ ಹುಡುಗನನ್ನು ನೋಡಿದರು.
ಅದೇ ಸಮಯದಲ್ಲಿ ನನಗೆ ವಿದೇಶಕ್ಕೆ ಹೋಗುವ ಅವಕಾಶ ದೊರಕಿತು.ಬೇರೆ ಸಮಯದಲ್ಲಾಗಿದ್ದರೆ ಹೋಗುತ್ತಿರಲಿಲ್ಲವಾಗಿತ್ತು.ಪ್ರೀತಿಸಿದ ಹುಡುಗಿಯ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು ಅವಳ ಮದುವೆಯನ್ನು ನೋಡುವುದು ಹೇಗೆ ಅಂದುಕೊಂಡು ಸಿಕ್ಕ ಅವಕಾಶವನ್ನು ಬಿಡದೆ ತನ್ನ ಪ್ರೀತಿಯನ್ನು ಪ್ರೀತಿಸಿದವಳನ್ನು ಬಿಟ್ಟು ಹೋಗಲು ನಿರ್ಧರಿಸಿದೆ.ಅಮ್ಮ ಎಷ್ಟು ಬೇಡ ಅಂದರೂ ಕೇಳದೆ ನಿಶ್ಚಿತಾರ್ಥಕ್ಕೆ ೧೦ ದಿನ ಇರುವಾಗ ಅಮೇರಿಕಾಕ್ಕೆ ಬಂದುಬಿಟ್ಟೆ.ಅದೇ ಕೊನೆ ಅವಳನ್ನು ನೋಡಿದ್ದು.೨ ವರ್ಷ ಅಮೇರಿಕಾದಲ್ಲಿ ಕೆಲಸಮಾಡಿದೆ ಅಮ್ಮ ಊರಿಗೆ ಬಾ ಮದುವೆಯಾಗು ಅಂತ ಪ್ರಾಣ ತಿನ್ನುತ್ತ ಇದ್ದಳು ಅದಕ್ಕೋಸ್ಕರ ಊರಿಗೆ ಹೊರಟಿದ್ದು.ನನ್ನ ಆಸೆ ಅಂತೂ ಕೈಗೂಡಲಿಲ್ಲ.ಅಮ್ಮನ ಆಸೆ ಆದರೂ ನೆರವೇರಿಸೋಣ ಅಂತ ಅಂದುಕೊಂಡು ಮಲಗಿದೆ.
ಎಚ್ಚರಗೊಂಡಾಗ ಮಂಗಳೂರಿನ ವಿಮಾನ ನಿಲ್ದಾಣದಲ್ಲಿದ್ದೆ.ಕರೆದುಕೊಂಡು ಹೋಗಲಿಕ್ಕೆ ತಂದೆ ಬಂದಿದ್ದರು.ಹೇಗಾಯಿತು ಪ್ರಯಾಣ ಅದು ಇದು ವಿಚಾರಿಸಿದರು.ತಂದೆಯ ಹತ್ತಿರ ಅಮೇರಿಕಾದ ವಿಷಯ ಮಾತನಾಡುತ್ತ ಮನೆಗೆ ಬಂದೆ.ಅಮ್ಮ ಮನೆಯ ಎದುರುಗಡೆ ನನಗೋಸ್ಕರ ಕಾಯುತ್ತಿದ್ದಳು.ನನ್ನ ನೋಡಿದಾಗ ಎಷ್ಟು ಖುಷಿಪಟ್ಟಳು ಅಮ್ಮ ನಾನು ಊರಿನಲ್ಲಿದ್ದಾಗ ತುಂಬಾ ದಪ್ಪವಾಗಿದ್ದಳು ನನ್ನ ಬಗ್ಗೆ ಆಲೋಚಿಸಿ ಸಣ್ಣಗಾಗಿ ಹೋಗಿದ್ದಳು.ತನಗೆ ಪ್ರೀತಿ ಸಿಗಲಿಲ್ಲ ಅಂದುಕೊಂಡು ಅಮ್ಮನ ಪ್ರೀತಿ ಮರೆತುಹೋಗಿದ್ದಕ್ಕೆ ಬೇಜಾರಾಯ್ತು.ಇನ್ನು ಮೇಲೆ ಅಮ್ಮನ ಬಿಟ್ಟು ಎಲ್ಲೂ ಹೋಗಬಾರದು ಅಂತ ನಿರ್ಧರಿಸಿದೆ.
ಅಮ್ಮ ನನಗೋಸ್ಕರ ನನಗೆ ಇಷ್ಟವಾದ ಬಂಗುಡೆಮೀನು ಸಾರ್ ಮಾಡಿದ್ದಳು.೨ ವರ್ಷವಾಗಿತ್ತು ಅಮ್ಮನ ಅಡುಗೆ ತಿನ್ನದೆ.ಊಟ ಮಾಡುತ್ತಾ ನನ್ನ ಎಲ್ಲಾ ಗೆಳೆಯರನ್ನು ಮನೆಯ ಹತ್ತಿರದವರನ್ನು ಕೇಳಿದೆ.ಅದಕ್ಕೆ ಎಲ್ಲಾ ಚೆನ್ನಾಗಿದ್ದಾರೆ ಎಲ್ಲರಿಗೂ ಮದುವೆ ಆಯ್ತು ನೀನು ಮಾತ್ರ ಮಾಡಿಕೊಂಡಿಲ್ಲ.ಈ ಸಲ ಮದುವೆ ಮಾಡಿಕೊಳ್ಳೋ ಮನು ಅಂದಾಗ ಆಯ್ತಮ್ಮ ಇನ್ನೊಂದು ೨ ತಿಂಗಳು ಹೋಗಲಿ ಆಮೇಲೆ ಆಗುತ್ತೀನಿ ಅಂದೆ.ಅವಾಗಲೇ "ಹಾಸಿನಿ"ಯ ನೆನಪಾಗಿದ್ದು..
ಅಮ್ಮ ಹಾಸಿನಿ ಹೇಗಿದ್ದಾಳೆ? ಅವಳ ಗಂಡನ ಮನೆ ಎಲ್ಲಿ? ಅವಳ ಗಂಡ ಏನು ಕೆಲಸದಲ್ಲಿದ್ದಾರೆ ಅಂತ ಕೇಳಿದಾಗ ನೀನು ಕೇಳುತ್ತಿರುವುದು ನಮ್ಮ ಪಕ್ಕದಮನೆ ಹುಡುಗಿ ಹಾಸಿನಿಯ ವಿಷಯನಾ ಅಂತ ಕೇಳಿದರು.ಹೌದಮ್ಮ ನಾನು ಹೋಗುವಾಗ ಅವಳಿಗೆ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು ಅವಳ ಮದುವೆಗೆ ಇರಲಿಲ್ಲ ಅದಕ್ಕೆ ಕೇಳಿದೆ.ಅಯ್ಯೋ ಪಾಪ ಆ ಹುಡುಗಿ ಅವಳ ಹಣೆಬರಹನೇ ಚೆನ್ನಾಗಿಲ್ಲ ಕಣೋ ಅಂದರು ಅಮ್ಮ ಯಾಕೆ ಏನಾದರೂ ಸಮಸ್ಯೆ ಆಯ್ತಾ ಅವಳಿಗೆ ಎಂದು ಕೇಳಿದೆ ನನ್ನ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.ಮನು ನೀನು ಹೋಗಿ ಒಂದು ವಾರಕ್ಕೆ ಇವಳು ಸ್ಕೂಟಿಯಲ್ಲಿ ಹೋಗುವಾಗ ಲಾರಿಗೆ ಢಿಕ್ಕಿ ಹೊಡೆದಿದ್ದಕ್ಕೆ ತಲೆಗೆ ಸರಿಯಾಗಿ ಪೆಟ್ಟು ತಗಲಿತ್ತು ಆಸ್ಪತ್ರೆಗೆ ಸೇರಿಸಿದಾಗ ಬದುಕುವುದೇ ಕಷ್ಟ ಅಂದಿದ್ದರು ಡಾಕ್ಟರ್. ದೇವರ ದಯೆಯಿಂದ ಬದುಕುವುಳಿದಳು ಆದರೆ ನೆನಪಿನ ಶಕ್ತಿ ಮಾತ್ರ ಕಳೆದುಕೊಂಡಿದ್ದಳು ಯಾರನ್ನು ಗುರುತಿಸುತ್ತಿರಲಿಲ್ಲ ಮೌನವಾಗಿ ಇರುತ್ತಿದ್ದಳು.ಈ ವಿಷಯ ಗೊತ್ತಾದ ಕೂಡಲೆ ವರನ ಕಡೆಯವರು ಈ ಮದುವೆ ಬೇಡ ಅಂತ ಹೇಳಿದರು.
ಹಾಸಿನಿಯ ತಾಯಿ ಶಾರದಕ್ಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಅವರ ನೋವಿನ ಮೊರೆ ದೇವರಿಗೆ ತಲುಪಿತು ಅಂತ ಕಾಣುತ್ತೆ ಈಗ ೨ ತಿಂಗಳ ಹಿಂದೆ ಹಾಸಿನಿಗೆ ಹಳೆಯ ನೆನಪುಗಳೆಲ್ಲಾ ಬಂದುಬಿಟ್ಟಿದೆ.ಆದರೂ ಮೊದಲಿನ ತರ ಇಲ್ಲ.ಮೌನಿಯಾಗಿರುತ್ತೆ ಕಣೋ.ನನ್ನ ಹತ್ತೀರ ಕೇಳುತ್ತಿದ್ದಳು ಮನು ಯಾವಾಗ ಬರುತ್ತಾನೆ ಅಂತ ನೀನು ಆ ಕಡೆ ಹೋದರೆ ಆ ಹುಡುಗಿಯನ್ನು ಮಾತನಾಡಿಸಿಕೊಂಡು ಬಾ ಅಂತ ಹೇಳಿ ಅಡುಗೆಮನೆ ಕಡೆ ಹೋದಳು.ಹಾಸಿನಿಗೆ ಮದುವೆಯಾಗಿಲ್ಲ ಅಂದಾಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.ದೇವರು ನನ್ನ ಪ್ರೀತಿಗೆ ಮೋಸಮಾಡಲಿಲ್ಲ ಅಂದುಕೊಂಡು ಅವಳನ್ನು ಮಾತನಾಡಿಸಲ್ಲಿಕ್ಕೆ ಹೊರಟು ಬಂದೆ..
ಪುಸ್ತಕ ಒದುತ್ತ ಕುಳಿತಿದ್ದಳು ನೋಡಿದಾಗ ಮನಸ್ಸಿಗೆ ಆದ ಆನಂದ ಹೇಳಲ್ಲಿಕ್ಕೆ ಆಗುವುದಿಲ್ಲ ಅಷ್ಟು ಖುಷಿಯಾಗಿತ್ತು. ಹಾಸಿನಿ ನನ್ನನ್ನು ನೋಡಿದಾಗ ಖುಷಿಯಿಂದ ಹಾಯ್ ಮನು ಯಾವಾಗ ಬಂದೆ ನಮ್ಮನೆಲ್ಲಾ ಮರೆತುಬಿಟ್ಟಿದ್ದಿಯಾ ಅಂದುಕೊಂಡಿದ್ದೆ ಅಂದಳು ನಾನು ಅಯ್ಯೋ ಊರು ಮತ್ತೆ ನಿಮ್ಮನೇಲ್ಲಾ ಹೇಗೆ ಮರೆಯಲಿ,ನಾನು ಯಾರನ್ನು ಮರೆತಿಲ್ಲ ಅಂದೆ ಅದಕ್ಕವಳು ತುಂಬಾ ಖುಷಿಪಟ್ಟಿದ್ದು ಅವಳ ಮುಖದಲ್ಲಿ ಕಾಣುತ್ತಿತ್ತು ಮತ್ತೆ ಕೇಳಿದೆ ನಿನ್ನ ಆರೋಗ್ಯ ಹೇಗಿದೆ ಅದಕ್ಕೆ ಅವಳು ನಾನು ಚೆನ್ನಾಗಿದ್ದೀನಿ, ಈವಾಗಂತೂ ಯಾವಾಗಲೂ ಖಾಲಿ ಇರುತ್ತೇನೆ ಪುಸ್ತಕ ಒದುತ್ತ ಇರುತ್ತಿನಿ ಅಂದಾಗ ಹಾಸಿನಿಯ ತಾಯಿ ಶಾರದಕ್ಕ ಬಂದು ವಿಚಾರಿಸಿದರು ನನ್ನ ಮದುವೆಯ ಬಗ್ಗೆ ಕೇಳಿದರು ಇಲ್ಲಾ ಶಾರದಕ್ಕ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ" ಅಂದಾಗ ನಿನ್ನ ಗೆಳೆಯರೆಲ್ಲಾ ಮದುವೆ ಮಾಡಿಕೊಂಡರು ನೀನು ಮದುವೆಯಾಗು ಮನು ಅಂದಳು ಹಾಸಿನಿ.ಆಯ್ತು ನೋಡುತ್ತೀನಿ ನಾಳೆ ಮತ್ತೆ ಬರುತ್ತೀನಿ ಅಂತ ಹೇಳಿ ಮನೆಗೆ ಬಂದುಬಿಟ್ಟೆ ಬರುವಾಗ ಒಂದು ನಿರ್ಧಾರ ಮಾಡಿಕೊಂಡೆ ಬಂದಿದ್ದೆ.
ರಾತ್ರಿ ಮಲಗುವಾಗ ಅಮ್ಮನ ಹತ್ತಿರ ನಾನು ಒಂದು ಹುಡುಗಿ ನೋಡಿದ್ದೇನೆ ಅವಳನ್ನು ಮದುವೆಯಾಗುತ್ತೇನೆ ನೀನು ಅವಳನ್ನು ಅವರ ಮನೆಯವರನ್ನು ಒಪ್ಪಿಸಬೇಕು ಅಂದೆ ಅದಕ್ಕೆ ಅಮ್ಮ ಖುಷಿಯಿಂದ ಆಯ್ತು ಮಾರಾಯ ನೀನು ಮದುವೆಗೆ ಒಪ್ಪಿಕೊಂಡಿದ್ದೆ ಪುಣ್ಯ ಯಾರು ಹುಡುಗಿ ಅಂದಾಗ "ಹಾಸಿನಿ" ಅಂದೆ ಅಮ್ಮ ನನ್ನನ್ನು ಆಶ್ಚರ್ಯದಿಂದ ನೋಡಿ ತಮಾಷೆ ಮಾಡುತ್ತಿದ್ದಿಯಾ ನಿಜ ಹೇಳುತ್ತಿದ್ದಿಯಾ ಮನು, ಇಲ್ಲಮ್ಮಾ ನಾನು ಅವಳನ್ನು ಮದುವೆಯಾಗುವುದು ನಿನಗೆ ಇಷ್ಟವಿಲ್ವಾ ಇಲ್ಲ ಅಂದರೆ ಹೇಳು ಬೇರೆ ಹುಡುಗಿಯನ್ನು ನೋಡು.ಇಲ್ಲಪ್ಪಾ ಅಂಥ ಒಳ್ಳೆಯ ಹುಡುಗಿ ಸೊಸೆ ಆಗಿಬರುವುದು ನನ್ನ ಪುಣ್ಯ ಕಣೋ, ನಿನ್ನ ಇಷ್ಟನೇ ನನ್ನ ಇಷ್ಟ ಮನು ನಾನು ಇಷ್ಟು ದಿನ ಅದರ ಬಗ್ಗೆ ಆಲೋಚನೆ ಮಾಡಿಲ್ಲ ಅದಕ್ಕೆ ಹೇಳಿದೆ.ನಾಳೆ ಅಪ್ಪಯ್ಯನ ಹತ್ತಿರ ಹಾಸಿನಿಯ ತಂದೆಯ ಹತ್ತಿರ ಮಾತನಾಡಲ್ಲಿಕ್ಕೆ ಹೇಳುತ್ತೀನಿ ಈವಾಗ ನಿದ್ರೆ ಮಾಡು ಅಂತ ಹೇಳಿ ಹೋದಳು.ಅಮ್ಮ ಹಾಸಿನಿಯನ್ನು ಒಪ್ಪಿಕೊಂಡಿದ್ದಕ್ಕೆ ಮದುವೆಯಾದಷ್ಟೇ ಖುಷಿಯಾಗಿತ್ತು ನನಗೆ.ಆದರೆ ಹಾಸಿನಿ ನನ್ನ ಮದುವೆಯಾಗಲ್ಲಿಕ್ಕೆ ಒಪ್ಪುತ್ತಾಳೊ ಇಲ್ಲವೋ ಅನ್ನುವ ಭಯಕಾಡುತ್ತಿತ್ತು.
ಹಾಸಿನಿಯ ತಂದೆ-ತಾಯಿ ನಮ್ಮ ತಂದೆ-ತಾಯಿ ಹಾಸಿನಿಯ ಹತ್ತಿರ ಮದುವೆಯ ವಿಷಯ ಮಾತನಾಡಿದ್ದರು.ಅವಳು ನಿಮ್ಮ ಇಷ್ಟನೇ ನನ್ನ ಇಷ್ಟ ಅಂತ ಒಪ್ಪಿಗೆ ಕೊಟ್ಟಳು. ಅಂತೂ ನನ್ನ ೩ ವರ್ಷದ ಕನಸು ಹಾಸಿನಿಯ ಜೊತೆ ಮದುವೆಯೊಂದಿಗೆ ನನಸಾಗಿತ್ತು.ಪ್ರಥಮ ರಾತ್ರಿಯಲ್ಲಿ ಹಾಸಿನಿ ನನ್ನ ಹತ್ತಿರ ಬಂದು "ರೀ ನಿಮಗೆ ಒಂದು ವಿಷಯ ಹೇಳುತ್ತೀನಿ ಅಂದಳು ಏನು ವಿಷಯ ಹೇಳು ಅಂದೆ ಅದಕ್ಕೆ ನಾನು ನಿಮ್ಮನ್ನು ೩ ವರ್ಷಗಳಿಂದ ಇಷ್ಟಪಟ್ಟಿದ್ದೆ ಅಂದಾಗ ನನಗೆ ಆಶ್ಚರ್ಯವಾಗಿತ್ತು ಮತ್ತೆ ಯಾಕೆ ನನಗೆ ಮೊದಲೆ ಹೇಳಲಿಲ್ಲ ಹಾಸಿನಿ ಅಂದೆ ಅದಕ್ಕೆ ಅವಳು ನಾನು ಹುಡುಗಿ ನಿಮ್ಮನ್ನು ಪ್ರೀತಿಸುತ್ತೇನೆ ಅಂತ ಹೇಗೆ ಹೇಳುವುದು ಅದು ಅಲ್ಲದೆ ಮನೆ ಹತ್ತಿರದ ಹುಡುಗ ನೀವು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತೀರಾ ಅಂತ ಭಯದಿಂದ ಹೇಳಲಿಲ್ಲ.ದೇವರು ದೊಡ್ಡವನು ನಾನು ಇಷ್ಟಪಟ್ಟ ಹುಡುಗನೇ ನನಗೆ ಗಂಡನಾಗಿ ಕೊಟ್ಟಿದ್ದಾನೆ ಅಂದಳು.ನನಗೂ ಸಹ ನಾನು ಪ್ರೀತಿಸಿದ ಹುಡುಗಿನೇ ಹೆಂಡತಿಯಾಗಿ ದೊರಕಿದಳು.ಅದಕ್ಕೆ ಇರಬೇಕು ಹಿರಿಯವರು ಹೇಳಿದ್ದು "ಮದುವೆ"ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತ ನನ್ನ ಪಾಲಿಗೆ ಅದು ನಿಜವಾಯಿತು..
ಎನ್.ರಾಜೇಶ್.ಕುಮಾರ್.ನೇರಳಕಟ್ಟೆ
No comments:
Post a Comment