Tuesday, 25 February 2014

"ಅಪ್ಪ-ಮಗ"

 ಮುಸ್ಸಂಜೆಯ ವೇಳೆ ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಪಡುವಣದತ್ತ ಹೋಗುತ್ತಿದ್ದಾನೆ.ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ತಮ್ಮ ಮನೆ ಕಡೆಗೆ ಹೋಗುತ್ತಿದ್ದವು. ಏಳನೀರು ವ್ಯಾಪಾರಿ ರಾಮಣ್ಣ ಈ ಲೋಕದ ವ್ಯಾಪಾರ ಮುಗಿಸಿ ದೇವರ ಹತ್ತಿರ ಹೋಗಲು ಕೊನೆಘಳಿಗೆ ಏಣಿಸುತ್ತಿದ್ದನು.ಊರಿನ ಜನರೆಲ್ಲಾ ರಾಮಣ್ಣನ ಮನೆಯ ಬಳಿ ಬಂದಿದ್ದರು.ಅಷ್ಟರಲ್ಲಿ ಸುಮ್ಮನಿದ ಬಂಡೆಗೆ ಅಲೆ ಅಪ್ಪಳಿಸಿದಂತೆ ರಾಮಣ್ಣನ ತೆಂಗಿನಮರಕ್ಕೆ "ಸಿಡಿಲು" ಬಡಿಯಿತು ಆ ಮರ ಅಲ್ಲಿಯೇ ತುಂಡಾಗಿ ಕೆಳಗೆಬಿತ್ತು.ಯಾರೋ ಕೂಗಿ ಹೇಳಿದ "ರಾಮಣ್ಣನ ಸಾಕುಮಗ(ತೆಂಗಿನಮರ) ಸಿಡಿಲಿನ ಹೊಡೆತಕ್ಕೆ ಸಿಕ್ಕಿ ತುಂಡಾಗಿಬಿಟ್ಟಿತು" ಆ ಮಾತನ್ನು ಕೇಳಿದ ತಕ್ಷಣ ಇಷ್ಟೊತ್ತು ಬಿಗಿಹಿಡಿದಿದ್ದ ತನ್ನ ಉಸಿರನ್ನು ನಿಲ್ಲಿಸಿದ.
  ರಾಮಣ್ಣ ಬಡ ಏಳನೀರು ವ್ಯಾಪಾರಿ.ಪರೋಪಕಾರಿ ಮನೋಭಾವದ ಸಹೃದಯದ ವ್ಯಕ್ತಿ ಆಗಿರುವುದರಿಂದ ಊರಿನವರಿಗೆ ಅವನನ್ನು ಕಂಡರೆ ತುಂಬಾ ಪ್ರ‍ೀತಿ.ರಾಮಣ್ಣನ ಹೆಂಡತಿ ತನ್ನ ಮೊದಲ ಹೆರಿಗೆಯಲ್ಲಿ ಗಂಡುಮಗುವನ್ನು ಕೊಟ್ಟು ದೇವರ ಪಾದ ಸೇರಿದ್ದಳು.ಹೆಂಡತಿ ಸುಟ್ಟ ಜಾಗದಲ್ಲಿ ಒಂದು ತೆಂಗಿನ ಸಸಿಯನ್ನು ನೆಟ್ಟಿದ.ಮಗನನ್ನು ಪ್ರೀತಿಯಿಂದ ನೋಡಿಕೊಳ್ಳುವ ಹಾಗೆ ಆ ತೆಂಗಿನಗಿಡವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.ದನಕರುಗಳಿಂದ ರಕ್ಷಿಸಿ ಪ್ರತಿದಿನ ತಪ್ಪದೇ ನೀರುಣಿಸುತ್ತಿದ್ದ.ಎಲ್ಲರಿಗೂ ಮಗನನ್ನು ತೋರಿಸಿ ಇವನು ನನ್ನ ಸ್ವಂತ ಮಗ,ತೆಂಗಿನಮರವನ್ನು ತೋರಿಸಿ ಸಾಕುಮಗ ಅನ್ನುತಿದ್ದ.ಮಗನ ವಿದ್ಯಾಭ್ಯಾಸಕ್ಕೆ ತನ್ನಲ್ಲಿರುವದೆಲ್ಲವನ್ನು ಕೊಟ್ಟಿದ್ದ.
  ಮಗ ಮತ್ತು ಸಾಕುಮಗ ಇಬ್ಬರು ಬೆಳೆದು ದೊಡ್ಡವರಾದರು.ಮಗನ ಖರ್ಚಿಗೆ ಎಷ್ಟು ಕೊಟ್ಟರು ಸಾಲದು ಅಂತ ಕೂಗಾಡುತ್ತಿದ್ದ.ಸಾಕುಮಗ ತನ್ನ ಸಾಕುತಂದೆಯಿಂದ ಏನು ತೆಗೆದುಕೊಳ್ಳದೇ ಅಪ್ಪನಿಗೆ ಪ್ರೀತಿಯಿಂದ ತನ್ನದೆಲ್ಲಾವನ್ನು ಕೊಡುತ್ತಿದ್ದ.ಮುದಿ ಅಪ್ಪನನ್ನು ಸಾಕಲು ಆಗದೇ ಸ್ವಂತ ಮಗ ಹೇಳದೇ ಕೇಳದೆ ಊರುಬಿಟ್ಟು ಓಡಿಹೋದ.ಆ ಘಟನೆಯ ನಂತರ ಪೂರ್ತಿ ಕುಗ್ಗಿಹೋದ.ತನ್ನ ಮಗ ನನಗೆ ಮಾಡಿದ ಮೋಸವನ್ನು ನೆನೆದು ಪ್ರತಿದಿನ ಅಳುತ್ತಿದ್ದ.ಸಾಕುಮಗನ ಆದಾಯದಿಂದ ರಾಮಣ್ಣನ ಜೀವನ ನಡೆಯುತ್ತಿತ್ತು.ಸ್ವಂತ ಮಗ ಕೈಬಿಟ್ಟರೂ ಸಾಕುಮಗ ಕೈಬಿಡಲಿಲ್ಲ.
 ಪ್ರೀತಿಯಿಂದ ಸಾಕಿದ ಮಗ ಜೀವನದ ಇಳಿವಯಸ್ಸಿನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನುವ ನಂಬಿಕೆಯಲ್ಲಿದ್ದ ಅಪ್ಪನಿಗೆ ಮಗ ಮಾಡಿದ ನಂಬಿಕೆ ದ್ರ‍ೋಹವನ್ನು ಆ ಮುದಿ ಹೃದಯ ಏಷ್ಟುದಿನ ತಡೆದಿತು.ಆ ಕೊರಗಿನಲ್ಲಿಯೇ ರಾಮಣ್ಣ ತನ್ನ ಕೊನೆಯ ಘಳಿಗೆ ಏಣಿಸುತ್ತಿದ್ದ.ಅದೇ ಸಮಯದಲ್ಲಿ ಆದ ಸಾಕುಮಗನ ಸಾವು ರಾಮಣ್ಣನ ಉಸಿರನ್ನು ನಿಲ್ಲಿಸಿಬಿಟ್ಟಿತು.
 ಸಾಕುಮಗನನ್ನೇ(ತೆಂಗಿನಮರ) ಎರಡು ತುಂಡುಮಾಡಿ ಮಗನನ್ನು ಅಪ್ಪನ ಶವದ ಅಡಿಯಲ್ಲಿಟ್ಟು ಊರಿನ ಜನರು ಅವರಿಬ್ಬರ ಶವಕ್ಕೆ ಬೆಂಕಿಯಿಟ್ಟರು.ಅಪ್ಪ-ಮಗ ಇಬ್ಬರು ಜೊತೆಯಾಗಿ ಮೋಸದ ಪ್ರಪಂಚದದಿಂದ ಮುಕ್ತಿಹೊಂದಿ ದೇವರೆಡೆಗೆ ಹೊರಟರು.

ಎನ್.ರಾಜೇಶ್.ಕುಮಾರ್.ನೇರಳಕಟ್ಟೆ.

No comments:

Post a Comment