ನನಗೆ ರವಿ ಬೆಳಗೆರೆಯವರ "ನಕ್ಷತ್ರ ಜಾರಿದಾಗ" ಮತ್ತು ಯಂಡಮೂರಿಯವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ "ದೀಪ ದೃಷ್ಟಿ" ಪುಸ್ತಕಗಳೆರೆಡು ಸಿಕ್ಕಿರಲಿಲ್ಲ.ತುಂಬಾ ಹುಡುಕಾಡಿದೆ. ಪುಸ್ತಕದಂಗಡಿಗಳಲ್ಲೂ,ಫ಼ೇಸಬುಕಿನಲ್ಲಿ ಸಹ ವಿಚಾರಿಸಿದೆ ಎಲ್ಲೂ ಸಿಗಲಿಲ್ಲ.ಕೊನೆಗೆ ಗೆಳೆಯನೊಬ್ಬ ಮೈಸೂರ್ ಬ್ಯಾಂಕ್ ಸರ್ಕಲಿನಲ್ಲಿ ಹಳೆಯ ಪುಸ್ತಕಗಳನ್ನು ಮಾರುವ ಅಜ್ಜ ಇದ್ದಾರೆ ಅವರ ಹತ್ತಿರ ಹೋಗಿ ವಿಚಾರಿಸು ಅಂತ ಹೇಳಿದ.ಅದಕ್ಕಾಗಿ ಇವತ್ತು ಬೆಳಿಗ್ಗೆ ಮ್ಯಾಚ್ ಮುಗಿಸಿಕೊಂಡು ಆ ಅಜ್ಜನ ಹತ್ತಿರ ಹೋಗಿದ್ದೆ ಅಲ್ಲೂ ಸಿಗಲಿಲ್ಲ ಆದರೆ ಸಾಧ್ಯವಾದರೆ ತರಿಸಿಕೊಡುತ್ತೇನೆ ಅಂತ ಹೇಳಿದರು ಅಜ್ಜ.ಅಲ್ಲಿಯೇ ಇದ್ದ ಪುಸ್ತಕಗಳನ್ನು ನೋಡುವಾಗ "ಮಹಾತ್ಮ ಗಾಂಧೀಜಿಯವರ ಆತ್ಮಕಥೆ" ಪುಸ್ತಕ ಅದನ್ನು ಕನ್ನಡಕ್ಕೆ ಗೊರೂರು ರಾಮಸ್ವಾಮಿಯವರು "ನನ್ನ ಸತ್ಯಾನ್ವೇಷಣೆ" ಅಂತ ಅನುವಾದ ಮಾಡಿದ ಪುಸ್ತಕ ಅಲ್ಲಿತ್ತು. ನಾನು ಈ ಪುಸ್ತಕಕ್ಕೆ ಏಷ್ಟು ಅಂತ ಕೇಳಿದೆ. ಅಜ್ಜ ಹೇಳಿದರು "ಇಪ್ಪತ್ತು ರೂಪಾಯಿ" ಕೊಡಿ ಅಂತ.ನನಗೆ ಆಶ್ಚರ್ಯವಾಯಿತು ೫೨೦ ಪುಟಗಳಿರುವ ಅದು ನಮ್ಮ ದೇಶದ ಮಹಾತ್ಮನ ಆತ್ಮಕಥೆ ಇರುವ ಪುಸ್ತಕಕ್ಕೆ ಕೇವಲ ೨೦ ರೂಪಾಯಿ ಅಂದಾಗ. ನಾನು ಮತ್ತೆ ಕೇಳಿದೆ ಅಂಕಲ್ ಗಾಂಧೀಜಿಯವರ ಪುಸ್ತಕಕ್ಕೆ ಬೆಲೆನೇ ಇಲ್ವಾ ಇಷ್ಟು ಕಮ್ಮಿ ಕೇಳುತ್ತಿದ್ದೀರಿ ಅಂದೆ.ಮೂರು ತಿಂಗಳಿನಿಂದ ನನ್ನ ಹತ್ತಿರವೇ ಇದೆ ಈ ಪುಸ್ತಕ ೨೦ ರೂಪಾಯಿಗೆ ಕೊಡುತ್ತಿನಿ ಅಂದರು ಯಾರು ತೆಗೆದುಕೊಂಡು ಹೋಗಲಿಲ್ಲ ನೀನು ಬೆಲೆ ಬಗ್ಗೆ ಮಾತನಾಡುತ್ತೀಯಾ.ಓದುಗರ ಮನಸ್ಥಿತಿ ಬದಲಾಗಿದೆ ಕಣ್ಣಪ್ಪಾ, ಅಲ್ನೋಡು ಅಲ್ಲಿರುವ ಕ್ರೈಮ್,ಸ್ಪೈ,ಥ್ರಿಲ್ ದಿನಕ್ಕೆ ೧೫ ಪುಸ್ತಕ ಮಾರಾಟವಾಗುತ್ತೆ ಅದು ನಾವು ಕೇಳಿದ ಬೆಲೆಗೆ.ಬೇರೆ ಕನ್ನಡ ಕಾದಂಬರಿ, ಕವನದ ಪುಸ್ತಕಗಳು ಅರ್ಧಬೆಲೆಗೆ ಕೊಡುತ್ತೀನಿ ಅಂದರೂ ಹೆಚ್ಚಿನವರು ತೆಗೆದುಕೊಳ್ಳುವುದಿಲ್ಲ.೭೦೦ ಪುಟಗಳಿರುವ ಮಹಾಭಾರತ,ರಾಮಾಯಣ ಪುಸ್ತಕಗಳಿಗೆ ೧೦೦ ರೂಪಾಯಿ ಕೊಡಿ ಅಂದರೆ ಯಾರು ಕೊಡುವುದಿಲ್ಲ.ಅದೇ ೩೦ ಪುಟಗಳಿರುವ ಸೆಕ್ಸ್ ಪುಸ್ತಕಗಳಿಗೆ ಪುಲ್ ರೇಟ್ ಕೊಟ್ಟು ಖರೀದಿ ಮಾಡುತ್ತಾರೆ ಅಂತ ಅಜ್ಜ ಹೇಳಿದರು.ಅವರ ಮಾತಿಗೆ ಏನು ಹೇಳಬೇಕು ಅಂತ ತಿಳಿಯದೇ ಗಾಂಧೀಜಿಯವರ ಆತ್ಮಕಥೆ ಪುಸ್ತಕಕ್ಕೆ ೨೦ ರೂಪಾಯಿ ಕೊಟ್ಟು ತಗೊಂಡು ಮನೆಗೆ ಬಂದೆ.
-ಎನ್.ಆರ್.ಕೆ.
-ಎನ್.ಆರ್.ಕೆ.
No comments:
Post a Comment