ತುಮಕೂರಿನಲ್ಲಿ ನಡೆದ ಕ್ರಿಕೇಟ್ ಪಂದ್ಯಾಟದಲ್ಲಿ ನಮ್ಮ ತಂಡ ಫೈನಲಿನಲ್ಲಿ ಅಮೋಘ ಜಯಗಳಿಸಿತ್ತು..ನನಗೆ ಮತ್ತು ತಂಡದವರಿಗೆ ತುಂಬಾ ಖುಷಿಯಾಗಿತ್ತು ಎಲ್ಲರೂ ಖುಷಿಯಿಂದಲೇ ಬೆಂಗಳೂರು ಕಡೆ ಹೊರಟೆವು.ನೆಲಮಂಗಲ ಹತ್ತಿರ ಬಂದಾಗ ನಮ್ಮ ಪ್ರೇಮತ್ತೆಯ ನೆನಪಾಗಿತ್ತು ಜೊತೆಗೆ ಪ್ರೀತಿಯ ಹುಡುಗಿ ಅತ್ತೆ ಮಗಳು ದಿವ್ಯಾ ನೆನಪಾಗಿದ್ದಳು.ಅವರ ಮನೆ ನೆಲಮಂಗಲದ ಹತ್ತಿರ ಅರಿಶಿನಕುಂಟೆಯಲ್ಲಿ ನಾನು ಅವರ ಮನೆಗೆ ಹೋಗದೆ ೬ ತಿಂಗಳು ಮೇಲಾಗಿತ್ತು.ಅದಕ್ಕೆ ಈ ಸಲ ಹೋಗಬೇಕು ಅಂದಕೊಂಡು ಅರಿಶಿನಕುಂಟೆಯಲ್ಲಿ ಕಾರಿನಿಂದ ಇಳಿದು ಗೆಳೆಯರಿಗೆಲ್ಲಾ ಮಾವನ ಮನೆಗೆ ಹೋಗುತ್ತಿನಿ ನಾಳೆ ಬೆಳಿಗ್ಗೆ ಮ್ಯಾಚ್ ನಲ್ಲಿ ಸಿಗುತ್ತೀನಿ ಅಂದಾಗ ನಾಳೆ ಸೆಮಿಫೈನಲ್ ಮ್ಯಾಚ್ ಇರುವುದು ಅತ್ತೆ ಮಗಳನ್ನು ನೋಡಿಕೊಂಡು ಮ್ಯಾಚ್ ಮರೆಯಬೇಡ ಅಂದರು ಗೆಳೆಯರೆಲ್ಲಾ ಬೆಳಿಗ್ಗೆ ಬರುತ್ತೀನಿ ಮಿಸ್ ಮಾಡುವುದಿಲ್ಲ ಅಂತ ಹೇಳಿ ಅತ್ತೆ ಮನೆ ಕಡೆ ಹೊರಟೆ..
ಪ್ರೇಮತ್ತೆ ನನ್ನ ತಂದೆಯ ತಂಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಡಾಕ್ಟರ್.ಮಾವ ನಾಗರಾಜ ಪೊಲೀಸ್ ಸಬ್ ಇನ್ಸಪೆಕ್ಟರ್.ಅತ್ತೆಗೆ ಇಬ್ಬರು ಹುಡುಗಿಯರು ಒಬ್ಬಳು ವಿದ್ಯಾ ಇನ್ನೊಬ್ಬಳು ದಿವ್ಯಾ.ವಿದ್ಯಾಳಿಗೆ ಮದುವೆಯಾಗಿ ಗಂಡನ ಮನೆಯಲ್ಲಿದ್ದಳು.ದಿವ್ಯಾ ನನಗಿಂತ ೨ ವರ್ಷ ಚಿಕ್ಕವಳು.ಕಾಲೇಜ್ ಓದುತ್ತಿದ್ದಳು.ಮುದ್ದು ಮುಖದ ಸ್ವಲ್ಪ ಡುಮ್ಮಿ ನನ್ನ ಪ್ರೀತಿಯ ಹುಡುಗಿ.ನಮ್ಮಿಬ್ಬರ ಪ್ರೀತಿಗೆ ಎರಡು ಮನೆಯಲ್ಲಿ ಒಪ್ಪಿಗೆಯಿತ್ತು ಅದರಿಂದ ನಮಗೆ ಪ್ರೀತಿಯಲ್ಲಿ ಸಮಸ್ಯೆಯಿಲ್ಲವಾಗಿತ್ತು.ಚಿಕ್ಕಂದಿನಲ್ಲಿಯೇ ನಮ್ಮಿಬ್ಬರ ಮದುವೆ ಮಾತುಕಥೆಯಾಗಿತ್ತು.ನಾವು ಸಹ ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತಿದ್ದೇವು.ನಾನು ದಿವ್ಯಾಳಿಗೆ "ಡುಮ್ಮಿ" ಅಂತ ಕರೆದರೆ ಅವಳು ನನಗೆ "ಲೂಸು" ಅಂತ ಕರೆಯುತ್ತಿದ್ದಳು.
ತುಂಬಾ ದಿನದ ನಂತರ ಮನೆಗೆ ಬಂದಿರುವುದರಿಂದ ಅತ್ತೆ ಮಾವ ತುಂಬಾ ವಿಚಾರಿಸಿದರು.ಆದರೆ ಡುಮ್ಮಿ ಮಾತ್ರ ಯಾಕೆ ಇವತ್ತು ಬಂದಿದ್ದು ವರ್ಷ ಬಿಟ್ಟು ಬರಬೇಕಾಗಿತ್ತು ಅಂತ ಹುಸಿಮುನಿಸು ತೋರಿಸಿದಳು.ಅವಳನ್ನು ಸಮಾಧಾನ ಮಾಡಲ್ಲಿಕ್ಕೆ ಸಾಕುಸಾಕಾಗಿತ್ತು.ಹುಡುಗಿಯರನ್ನು ಸಮಾಧಾನ ಮಾಡಲ್ಲಿಕ್ಕೆ ಸತ್ಯ ಹೇಳಿದರೆ ಪ್ರಯೋಜನಯಿಲ್ಲ ಅಂತ ಗೊತ್ತಿತ್ತು ಅದಕ್ಕೆ ಸುಳ್ಳು ಸುಳ್ಳು ಹೇಳಿ ಅವಳನ್ನು ಸಮಾಧಾನ ಮಾಡಿದೆ.ಕೊನೆಗೂ ಅವಳ ಮುದ್ದುಮುಖದಲ್ಲಿ ನಗೆಯನ್ನು ನೋಡಿದೆ.ದಿವ್ಯಾಳ ನಗು ನನಗೆ ತುಂಬಾ ಖುಷಿಕೊಡುತ್ತಿತ್ತು.ನಗುಮಖದ ಅಂದಕ್ಕೆ ದಿವ್ಯಾಳನ್ನು ಇಷ್ಟಪಟ್ಟಿರಬೇಕು ಅನಿಸುತ್ತಿತ್ತು ನನಗೆ.
ಅತ್ತೆ ನನಗಿಷ್ಟವಾದ ಮೀನು ಸಾರು ಮಾಡಿದ್ದರು.ಊಟ ಮಾಡುವಾಗ ಅತ್ತೆಗೆ ಹೇಳಿದೆ"ಅತ್ತೆ ನಾಳೆ ಬೆಳಿಗ್ಗೆ ಜಯನಗರದಲ್ಲಿ ಮ್ಯಾಚ್ ಇದೆ ಅದಕ್ಕೆ ನಾನು ಬೆಳಿಗ್ಗೆ ಬೇಗ ಹೋಗುತ್ತೀನಿ" ಅಂದೆ ಡುಮ್ಮಿ ಅಷ್ಟಕ್ಕೆ ಮುಖ ಊದಿಸಿಕೊಂಡಳು.ಅತ್ತೆ ಹೇಳಿದರು ನಾಳೆ ಹೋಗುವುದು ಬೇಡ ೨ ದಿನ ಇಲ್ಲೆ ಇರು ಮ್ಯಾಚ್ ಆಡಲಿಲ್ಲ ಅಂದರೆ ದೇಶ ಮುಳುಗುವುದಿಲ್ಲ ಅಂದರು.ಅದಕ್ಕೆ ದಿವ್ಯಾ ಕೂಡ "ಹೌದು ಯಾವಾಗ ನೋಡಿದರು ಕ್ರಿಕೇಟ್ ಅನ್ನುವುದು ಬಿಟ್ಟರೆ ನಿನಗೆ ಬೇರೆ ಏನು ಗೊತ್ತಿಲ್ವಾ ಬರುವುದೇ ಅಪರೂಪ ನೀನು ೨ ದಿನ ನಮ್ಮನೆಯಲ್ಲಿರು" ಅಂದಳು ಮಾವ ಸಹ "ಮನು ಹೋಗುವುದು ಬೇಡ" ಅಂದರು.ಒಳ್ಳೆ ಸಂಕಷ್ಟಕ್ಕೆ ಸಿಲುಕಿದ ಅನುಭವ ನನಗೆ. ನಮ್ಮ ಟೀಮ್ ಸೆಮಿಫೈನಲಿಗೆ ಹೋಗಿತ್ತು ಬೌಲರ್ ಆದ ನಾನು ಹೋಗಲೇಬೇಕಿತ್ತು.ಅದನ್ನು ಅತ್ತೆ ಮಾವನಿಗೆ ಹೇಳಿ ಒಪ್ಪಿಸಿದೆ.ಆದರೆ ಡುಮ್ಮಿ ಮಾತ್ರ ಸಿಟ್ಟುಮಾಡಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದಳು.ನಾನು ಎಷ್ಟೇ ಕರೆದರೂ ಮಾತಾಡಲಿಲ್ಲ.ನಾನು ಸಹ ಸುಮ್ಮನಾದೆ ನಾಳೆ ಮತ್ತೆ ಸರಿಯಾಗುತ್ತಾಳೆ ಅಂತ ಗೊತ್ತಿತ್ತು ಅದಕ್ಕೆ ಬೆಳಿಗ್ಗೆ ೫.೩೦ ಕ್ಕೆ ಅಲಾರಾಮ್ ಇಟ್ಟು ಮಲಗಿದೆ.
ಅಲರಾಮ್ ಮೊಳಗಿತು ನಿದ್ದೆಕಣ್ಣಿನಲ್ಲಿಯೇ ಎದ್ದು ಬಾತರೂಮಿಗೆ ಹೋಗಿ ಹಲ್ಲುಜ್ಜಿ ಮುಖ ತೊಳೆದು ಬರುವಷ್ಟರಲ್ಲಿ ದಿವ್ಯಾ ಸಹ ಎದ್ದಿದಳು.ಕಿಚನ್ ನಲ್ಲಿ ಟೀ ಮಾಡಿ ತಂದುಕೊಟ್ಟಳು."ಸಾರಿ ಕಣೇ ಡುಮ್ಮಿ ಇನ್ನೊಂದು ಸಲ ಬಂದು ಒಂದು ವಾರ ನಿಮ್ಮನೆಯಲ್ಲಿರುತ್ತೇನೆ ಆಯ್ತಾ ಬೇಜಾರುಮಾಡಿಕೊಳ್ಳಬೇಡ ಅಂದೆ.ದಿವ್ಯಾ ನನ್ನ ಹತ್ತಿರ ಬಂದು ಪ್ರೀತಿಯಿಂದ ಮೊದಲಬಾರಿಗೆ ನನ್ನನ್ನು ತಬ್ಬಿಕೊಂಡಳು.ನಾನು ಸುಮ್ಮನೆ ಹಾಗೆ ನಿಂತುಕೊಂಡೆ ಏನು ಮಾತನಾಡದೇ." ಐ ಲವ್ ಯೂ ಲೂಸು"ಅಂದಳು ಪ್ರೀತಿಯಿಂದ ನಾನು " ಐ ಲವ್ ಯೂ ಡುಮ್ಮಿ"ಅಂದೆ.ನಾವು ತಬ್ಬಿಕೊಂಡಿರುವುದು ಅತ್ತೆ ಮಾವ ನೋಡಿದರೆ ತಪ್ಪಾಗುತ್ತೆ ಅಂತ ಅವಳ ಹಣೆಗೆ ಸಿಹಿಮುತ್ತು ಕೊಟ್ಟು ಡುಮ್ಮಿ ಟೈಮ್ ಆಯ್ತು ಮತ್ತೆ ಬರುತ್ತಿನಿ ಅಂತ ಹೇಳಿ ಬಂದೆ ಆದರೆ ನನ್ನ ಮನಸ್ಸು ಅಲ್ಲೆ ಅವಳ ಹತ್ತಿರವೇ ಇತ್ತು.
ಮೆಜಿಸ್ಟಿಕ್ ಹೋಗುವ ಬಿ.ಎಮ್.ಟಿ.ಸಿ.ಹತ್ತಿದೆ.ಬಸ್ಸು ತುಂಬಾ ಜನರಿದ್ದರು.ನಾನು ಮೊದಲಬಾರಿಗೆ ಅವಳ ಹಣೆಗೆ ಕೊಟ್ಟ ಸಿಹಿಮುತ್ತು ಮತ್ತು ಮೊದಲ ಆಲಿಂಗನದ ಸಿಹಿಘಳಿಗೆಯನ್ನು ನೆನಪುಮಾಡಿಕೊಳ್ಳುತ್ತ ಟಿಕೆಟ್ ಮಾಡುವುದೇ ಮರೆತುಬಿಟ್ಟಿದ್ದೆ.ಬಸ್ಸು ಹೋಗುತ್ತಿತ್ತು ನಾನು ಆ ಕನಸಲೇ ಇದ್ದೆ.ಯಶವಂತಪುರದ ಹತ್ತಿರ ಟಿಕೆಟ್ ಚೆಕ್ಕಿಂಗ್ ಅವರು ಹತ್ತಿ ಎಲ್ಲರ ಟಿಕೆಟ್ ಚೆಕ್ ಮಾಡುತ್ತಿದ್ದರು ನನಗೆ ಅವಾಗ ಸಹ ಗೊತ್ತಾಗಲಿಲ್ಲ ನಾನು ಇನ್ನು ಆ ಆಲಿಂಗನದ ನೆನಪಲೇ ಇದ್ದೆ.ನನ್ನ ಹತ್ತಿರ ಬಂದು ಟಿಕೆಟ್ ಕೇಳಿದಾಗಲೇ ಗೊತ್ತಾಗಿದ್ದು ನಾನು ಟಿಕೆಟ್ ಮಾಡಿಲ್ಲ ಅಂತ.ಒಂಥರಾ ನಾಚಿಕೆಯಾಯ್ತು.ಕಂಡಕ್ಟರ್ ತಪ್ಪಿಲ್ಲ ನಾನೇ ಟಿಕೆಟ್ ಮಾಡಿಲ್ಲ ದಂಡ ಕಟ್ಟುತ್ತೀನಿ ಅಂದೆ.ಅದಕ್ಕೆ ಚೆಕ್ಕಿಂಗ್ ಆಫೀಸರ್ ಇಲ್ಲಿ ಆಗುವುದಿಲ್ಲ ಡಿಪೋಗೆ ಬಾ ಅಲ್ಲಿ ಫೈನ್ ಕಟ್ಟು ಅಂದ ಆಕಾಶ ಕಳಚಿ ತಲೆಮೇಲೆ ಬಿದ್ದಹಾಗಾಯಿತು ಯಾಕೆಂದರೆ ನನಗೆ ಮೊದಲೇ ಮ್ಯಾಚಗೆ ಟೈಮ್ ಆಗಿತ್ತು.ಇ ಸಮಸ್ಯೆಯಿಂದ ಮತ್ತು ಲೇಟ್ ಆಯಿತು.ಕೊನೆಗೆ ತುಂಬಾ ಕೇಳಿಕೊಂಡ ಮೇಲೆ ಹಣ ತೆಗೆದುಕೊಂಡು ನನ್ನನ್ನು ಬಿಟ್ಟರು.ಅಲ್ಲಿಂದ ಆಟೋ ಮಾಡಿಕೊಂಡು ಜಯನಗರಕ್ಕೆ ಹೋಗಿ ಮ್ಯಾಚ್ ಆಡಿದೆ ನಮ್ಮ ತಂಡ ಜಯಗಳಿಸಿತು.
ಪ್ರೀತಿ ಶುರುವಾಗಿ ಒಂದೆರೆಡು ದಿನಗಳಲ್ಲಿ ಮುತ್ತು,ಅಪ್ಪುಗೆಯಾಗುವ ಈ ಕಾಲದಲ್ಲಿ ನಾನು ಮೂರು ವರ್ಷಗಳ ನಂತರ ಅದು ಅವಳೇ ಬಂದು ತಬ್ಬಿಕೊಂಡಿದ್ದರಿಂದ ಮನಸ್ಸಿನ ಹಿಡಿತ ತಪ್ಪಿ ಒಂದು ಮುತ್ತು,ಆಲಿಂಗನ ಮಾಡಿದ್ದಕ್ಕೆ ೩೦೦ ರೂಪಾಯಿ ಬಿ.ಎಮ್.ಟಿ.ಸಿ.ಗೆ ದಂಡ ಕಟ್ಟಿದ್ದು,ಬೆಳಿಗ್ಗೆ,ಬೆಳಿಗ್ಗೆ ಚೆಕ್ಕಿಂಗ್ ಆಫೀಸರ್ ಹತ್ತಿರ ಉಗಿಸಿಕೊಂಡಿದ್ದು, ಅಲ್ಲದೇ ೨೫೦ ರೂಪಾಯಿ ಆಟೋ ಚಾರ್ಜ್ ಕೊಟ್ಟಿದ್ದು.ಒಂದೇ ಅಪ್ಪುಗೆಗೆ ಇಷ್ಟು ಸಮಸ್ಯೆಯಾಗಿದೆ ನನಗೆ.ಇನ್ನು ದಿನ ಅಪ್ಪುಗೆಯಲ್ಲಿರುವ ಹುಡುಗರ ಗತಿಯೇನು?
ಮನಸ್ಸು ಹೇಳಿತು ಬೆಳಿಗ್ಗೆ ಬೆಳಿಗ್ಗೆ ಆಲಿಂಗನ ಬೇಕಿತ್ತಾ ನಿನಗೆ ಅಂತ ಕೇಳಿದ ಹಾಗಾಯಿತು.ಅತ್ತೆಗೆ ಪೋನ್ ಮಾಡಿ ನಿಮ್ಮ ಮಗಳನ್ನು ಒಂದು ಸಲ ತಬ್ಬಿಕೊಂಡಿದ್ದಕ್ಕೆ ಇಷ್ಟೇಲ್ಲಾ ಸಮಸ್ಯೆ ಆಯ್ತು ಇನ್ನು ಅವಳನ್ನು ಮದುವೆ ಮಾಡಿಕೊಂಡರೆ ಹೇಗೆ" ಅಂತ ನಗುತ್ತ ಹೇಳಿದೆ ಅದಕ್ಕೆ ಅತ್ತೆ ನಗುತ್ತ "ನಮ್ಮ ಕಣ್ಣು ತಪ್ಪಿಸಿ ಕದ್ದುಮುಚ್ಚಿ ತಬ್ಬಿಕೊಂಡರೆ ಹೀಗೆ ಆಗುವುದು ಮನು ಮದುವೆ ಮಾಡಿಕೊಂಡು ತಬ್ಬಿಕೊಂಡಿದ್ದರೆ ಏನು ಆಗುತ್ತಿರಲಿಲ್ಲ ಅಂದರು .ಅತ್ತೆಯ ಮಾತು ಸತ್ಯ ಅನಿಸಿತು.ಇನ್ನು ಡುಮ್ಮಿಯನ್ನು ಮದುವೆ ಆಗುವ ತನಕ ತಬ್ಬಿಕೊಳ್ಳುವುದಿಲ್ಲ,ಮುತ್ತು ಕೊಡುವುದಿಲ್ಲ ಅಂತ ಮನಸ್ಸಿನಲ್ಲಿ ನಿರ್ಧರಿಸಿಕೊಂಡು ಅತ್ತೆ ಮನೆಗೆ ಹೋಗುವ ವಿಚಾರ ಕೈಬಿಟ್ಟು ಕ್ರಿಕೇಟ್ ಆಡಲ್ಲಿಕ್ಕೆ ಹೊರಟೆ........
ಎನ್.ರಾಜೇಶ್.ಕುಮಾರ್.ನೇರಳಕಟ್ಟೆ...
Super NRK yare :)
ReplyDeleteThanks Hegdrey....
Delete